ಬೆಂಗಳೂರು, ಏ. 29 (DaijiworldNews/TA): ಐಪಿಎಲ್ 2026 ನಲ್ಲಿ ಏಪ್ರಿಲ್ 28 ರಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಪಂಜಾಬ್ ತಂಡ ತನ್ನ ಮೊದಲ ಸೋಲನ್ನು ಕಂಡಿತು. ರೋಚಕತೆಯಿಂದ ಕೂಡಿದ್ದ ಈ ಹೈ-ಸ್ಕೋರ್ ಪಂದ್ಯದಲ್ಲಿ ಅಚಾತೂರ್ಯವಾಗಿದೆ. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕ್ರೀಡಾಂಗಣದಲ್ಲಿ ಕುಳಿತಿದ್ದ ಅಭಿಮಾನಿಗೆ ಚೆಂಡು ತಾಗಿ ಗಾಯವಾದ ಘಟನೆ ನಡೆದಿದೆ.

ಪಂಜಾಬ್ ತಂಡದ ಬ್ಯಾಟರ್ ಪ್ರಿಯಾಂಶ್ ಆರ್ಯ ಕೇವಲ 11 ಎಸೆತಗಳಲ್ಲಿ 29 ರನ್ ಗಳಿಸಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಆದರೆ ಅವರ ಸಿಕ್ಸರ್ವೇ ಕ್ರೀಡಾಂಗಣದಲ್ಲಿ ಕುಳಿತಿದ್ದ ವೃದ್ಧ ಅಭಿಮಾನಿಗೆ ಗಾಯಕ್ಕೆ ಕಾರಣವಾಯಿತು. ಚೆಂಡು ನೇರವಾಗಿ ಅವರ ಮುಖಕ್ಕೆ ಬಿದ್ದು ಕಣ್ಣು ಮತ್ತು ಮೂಗಿನ ಮಧ್ಯಭಾಗಕ್ಕೆ ತಾಗಿ ರಕ್ತಸ್ರಾವ ಉಂಟಾಯಿತು.
ಗಾಯಗೊಂಡ ಅಭಿಮಾನಿಗೆ ತಕ್ಷಣವೇ ಕ್ರೀಡಾಂಗಣದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿದ್ದು, ಬ್ಯಾಂಡೇಜ್ ಹಾಕಿ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಯಿತು. ಅಗತ್ಯವಿದ್ದರೆ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯೂ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸಾಮಾನ್ಯವಾಗಿ ಕ್ರೀಡಾಂಗಣಗಳಲ್ಲಿ ಉಂಟಾಗುವ ಇಂತಹ ಘಟನೆಗಳಿಗೆ ಆಯೋಜಕರು ನೇರ ಹೊಣೆ ಹೊರುವುದಿಲ್ಲವೆಂದು ಟಿಕೆಟ್ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ಆದರೂ ಪ್ರೇಕ್ಷಕರ ಸುರಕ್ಷತೆಗೆ ಸಂಬಂಧಿಸಿದ ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಈ ರೀತಿಯ ಸಂದರ್ಭಗಳಲ್ಲಿ ಕೆಲ ಆಟಗಾರರು ಮಾನವೀಯತೆ ತೋರಿರುವ ಉದಾಹರಣೆಗಳೂ ಇವೆ. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಹೊಡೆತಗಳಿಂದ ಗಾಯಗೊಂಡ ಅಭಿಮಾನಿಗಳ ವಿಚಾರ ತಿಳಿದು ನೆರವಾದ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ.