ಚೆನ್ನೈ, ಮೇ. 03 (DaijiworldNews/AA): ಐಪಿಎಲ್ನ 44ನೇ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 159 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡ 18.1 ಓವರ್ಗಳಲ್ಲಿ 160 ರನ್ ಕಲೆಹಾಕುವ ಮೂಲಕ ಗೆಲುವು ಸಾಧಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯನ ಹಾರ್ದಿಕ್ ಪಾಂಡ್ಯ, "ಇದು ಕೇವಲ ಒಂದು ರಾತ್ರಿಯ ಸೋಲಲ್ಲ, ಇಡೀ ಸೀಸನ್ ನಮಗೆ ಕಠಿಣವಾಗಿದೆ. ನಮ್ಮ ಎದುರಾಳಿ ತಂಡದವರು ನಮಗಿಂತ ಉತ್ತಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು. ಫೀಲ್ಡಿಂಗ್ನಲ್ಲೂ ಮಿಂಚಿದರು. ಸೋಲಿಗೆ ಯಾವುದೇ ನೆಪ ಹೇಳಲು ಸಾಧ್ಯವಿಲ್ಲ. ಸಿಎಸ್ಕೆ ನಮಗಿಂತ ಉತ್ತಮವಾಗಿ ಆಡಿದ್ದಾರೆ. ಅದಕ್ಕೆ ಅವರು ಗೆದ್ದಿದ್ದಾರೆ" ಎಂದು ತಿಳಿಸಿದರು.
"ಇದೇ ವೇಳೆ ತಂಡದ ಬ್ಯಾಟಿಂಗ್ ಬಗ್ಗೆ ವಿಶ್ಲೇಷಿಸಿದ ಪಾಂಡ್ಯ, ಒಂದು ಹಂತದಲ್ಲಿ ನಾವು 180 ರಿಂದ 190 ರನ್ ಗಳಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ 10 ಓವರ್ಗಳ ನಂತರ ನಾವು ಲಯವನ್ನು ಕಳೆದುಕೊಂಡೆವು. ಸರಿಯಾದ ಫಿನಿಶಿಂಗ್ ನೀಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಕ್ರೀಸ್ಗೆ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡುವುದು ಸುಲಭವಾಗಿರಲಿಲ್ಲ" ಎಂದರು.
"ಇಲ್ಲಿ ವಿಕೆಟ್ಗಳನ್ನು ಕೈಯಲ್ಲಿಟ್ಟುಕೊಂಡು ಲೆಕ್ಕಾಚಾರದ ಆಟವಾಡುವುದು ಮುಖ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್ಗಳಿಗೆ ಚೆಂಡನ್ನು ಸರಿಯಾಗಿ ಬೌಂಡರಿ ದಾಟಿಸಲು ಸಾಧ್ಯವಾಗಲಿಲ್ಲ. ಎದುರಾಳಿ ಬೌಲರ್ಗಳು ಅತ್ಯಂತ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡಿದರು. ನಾವು ಇನ್ನೂ ಎಷ್ಟು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಿತ್ತು ಎಂದು ನನಗೆ ತಿಳಿದಿಲ್ಲ. ಅವರ ವಿಕೆಟ್ ಪಡೆಯಲು ಬಹುಶಃ ನಾವು ಬೆಂಕಿಯ ಉಂಡೆಗಳನ್ನೇ ಎಸೆಯಬೇಕಿತ್ತೇನೋ! ನಮ್ಮಲ್ಲಿ ಲಭ್ಯವಿದ್ದ ಅತ್ಯುತ್ತಮ ಬೌಲಿಂಗ್ ಆಯ್ಕೆಗಳನ್ನೇ ನಾವು ಬಳಸಿದೆವು. ಆದರೆ ಎದುರಾಳಿ ಬ್ಯಾಟರ್ಗಳು ಹೆಚ್ಚು ಬುದ್ಧಿವಂತಿಕೆಯಿಂದ ಆಡಿದರು ಎಂದು ಹೇಳಿದರು.