ಬೆಂಗಳೂರು, ಮೇ. 03 (DaijiworldNews/AA): ಐಪಿಎಲ್ 2026ರ ಸೀಸನ್ ನಲ್ಲಿ ಸದ್ಯ ತಂಡಗಳ ನಡುವೆ ಪ್ಲೇ-ಆಫ್ ಹಂತಕ್ಕೇರಲು ಪೈಪೋಟಿ ನಡೆಯುತ್ತಿದೆ. ಮುಂದಿನ ಪಂದ್ಯಗಳಿಗೂ ಮುನ್ನ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮುಂದಿನ ಪಂದ್ಯವಾಡಲು ಆರ್ಸಿಬಿಗೆ ಒಂದು ವಾರದ ಬಿಡುವು ಲಭಿಸಿದೆ. ಈ ಬಿಡುವನ್ನು ಬಳಸಿಕೊಂಡಿರುವ ತಂಡ ಮಾಲ್ಡೀವ್ಸ್ ಗೆ ತೆರಳಿದ್ದು, ವಿಶ್ರಾಂತಿ ಪಡೆಯುತ್ತಿದೆ.
ಟೂರ್ನಿಯ ಸತತ ಪ್ರಯಾಣ ಮತ್ತು ಒತ್ತಡದಿಂದ ಹೊರಬರಲು ಮ್ಯಾನೇಜ್ಮೆಂಟ್ ಆಟಗಾರರಿಗೆ ಈ ಪ್ರವಾಸ ಆಯೋಜಿಸಿದೆ. ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಲ್ಡೀವ್ಸ್ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ಈ ಪ್ರವಾಸಕ್ಕೆ ತಂಡದ ಬಹುತೇಕ ಆಟಗಾರರು ತೆರಳಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಓಪನರ್ ಫಿಲ್ ಸಾಲ್ಟ್ ಈ ಪ್ರವಾಸದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಆರ್ಸಿಬಿ ತಂಡವು 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸುವ ಮೂಲಕ 12 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ಲೇ-ಆಫ್ ಹಂತಕ್ಕೇರಲು ಆರ್ಸಿಬಿಗೆ ಕೇವಲ ಎರಡು ಗೆಲುವುಗಳ ಅವಶ್ಯಕತೆಯಿದೆ.