ಬೆಂಗಳೂರು, ಮೇ. 23 (DaijiworldNews/TA): ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ದೇಶದ ಎರಡನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭವ್ಯ ಶಂಕುಸ್ಥಾಪನೆ ನೆರವೇರಿಸಿದರು.

ಈ ಐತಿಹಾಸಿಕ ಯೋಜನೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಆನೇಕಲ್ ಶಿವಣ್ಣ ಅವರು ಸಿಎಂ ಮತ್ತು ಡಿಸಿಎಂ ಅವರಿಗೆ ಬೆಳ್ಳಿ ಗದೆ ಉಡುಗೊರೆಯಾಗಿ ನೀಡಿ ಅಭಿನಂದಿಸಿ ಗೌರವಿಸಿದರು. ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುಮಾರು 100 ಎಕರೆ ಪ್ರದೇಶದಲ್ಲಿ ರೂ. 900 ಕೋಟಿ ವೆಚ್ಚದಲ್ಲಿ ಈ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. 80 ಸಾವಿರ ಆಸನ ಸಾಮರ್ಥ್ಯ ಹೊಂದಲಿರುವ ಈ ಸ್ಟೇಡಿಯಂ ದೇಶದ ಎರಡನೇ ಅತಿ ದೊಡ್ಡ ಕ್ರೀಡಾಂಗಣವಾಗಲಿದೆ.
ಸೂರ್ಯನಗರದ ಸಮೀಪ ನಿರ್ಮಾಣವಾಗಲಿರುವ ಈ ಯೋಜನೆ ಮುಂದಿನ 2ರಿಂದ 3 ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಬೃಹತ್ ಆಪಲ್ ಹಾರ, ಪೂರ್ಣಕುಂಭ ಸ್ವಾಗತ ಹಾಗೂ ಸಾಂಪ್ರದಾಯಿಕ ಕಲಾತಂಡಗಳ ಮೂಲಕ ಅದ್ಧೂರಿ ಸ್ವಾಗತ ನೀಡಲಾಯಿತು. ಈ ಸ್ಟೇಡಿಯಂನಲ್ಲಿ 11ಕ್ಕೂ ಹೆಚ್ಚು ಕ್ರೀಡೆಗಳಿಗೆ ವಿಶ್ವಮಟ್ಟದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್, ವಾಲಿಬಾಲ್, ಹ್ಯಾಂಡ್ಬಾಲ್, ಟೇಬಲ್ ಟೆನ್ನಿಸ್, ಸ್ಕ್ವಾಷ್, ಕಬಡ್ಡಿ, ಖೋ-ಖೋ, ಜುಡೋ, ಟೈಕ್ವಾಂಡೋ, ಕುಸ್ತಿ ಹಾಗೂ ಫೆನ್ಸಿಂಗ್ಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ.
ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ಟೆನ್ನಿಸ್ ಕೋರ್ಟ್, ಪಾಡೆಲ್ ಮತ್ತು ಪಿಕಲ್ಬಾಲ್ ಅಂಕಣಗಳು, ಒಲಿಂಪಿಕ್ ಗಾತ್ರದ ಈಜುಕೊಳ, ಹೈ-ಡೈವಿಂಗ್ ಪೂಲ್ ಹಾಗೂ ಅಭ್ಯಾಸ ಕೊಳ ನಿರ್ಮಾಣವಾಗಲಿದೆ. 500ಕ್ಕೂ ಹೆಚ್ಚು ವಾಹನಗಳಿಗೆ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ, ಕ್ರೀಡಾ ಪರಿಕರಗಳ ಮಳಿಗೆಗಳು, ಉಪಹಾರ ಗೃಹಗಳು, ಆಟಗಾರರ ವಸತಿ ಗೃಹಗಳು, ಹೆಲಿಪ್ಯಾಡ್ ಹಾಗೂ ಹಸಿರು ವಲಯ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್, ವಸತಿ ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಸೇರಿದಂತೆ ಹಲವು ನಾಯಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಜಮೀರ್ ಅಹಮದ್ ಖಾನ್, “ಬೆಂಗಳೂರು ಹೊರವಲಯದಲ್ಲಿ ಮತ್ತೊಂದು ಬೃಹತ್ ಕ್ರೀಡಾಂಗಣ ನಿರ್ಮಾಣದ ಅವಶ್ಯಕತೆ ಇತ್ತು. ರೈತರ ಬೇಡಿಕೆಯಂತೆ ಈಗ ಯೋಜನೆ ಸಾಕಾರಗೊಳ್ಳುತ್ತಿದೆ” ಎಂದು ಹೇಳಿದರು.