ಅಹಮದಾಬಾದ್, ಜೂ. 02 (DaijiworldNews/AA): ಫೈನಲ್ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿದ ಹಿನ್ನೆಲೆ ಎರಡನೇ ಬಾರಿಗೆ ಚಾಂಪಿಯನ್ ಆದ ಆರ್ಸಿಬಿ ತಂಡದ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್ ಅವರಿಗೆ ಮುಂದಿನ ಸೀಸನ್ನ ಒಂದು ಪಂದ್ಯಕ್ಕೆ ನಿಷೇಧ ಹೇರಿ ಐಪಿಎಲ್ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.

ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯದ 10ನೇ ಓವರ್ನಲ್ಲಿ ವಿಕೆಟ್ ಪತನದ ಬಳಿಕ ಟಿಮ್ ಡೇವಿಡ್ ಅವರು ಮೈದಾನದ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಬ್ಯಾಗ್ ಎಸೆದಿದ್ದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆಯಾಗಿದೆ. ಪಂದ್ಯದ ಸಮಯದಲ್ಲಿ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯ ಕಡೆಗೆ ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಅಥವಾ ಕ್ರಿಕೆಟ್ ಸಾಮಗ್ರಿಯನ್ನು (ನೀರಿನ ಬಾಟಲ್, ಇತ್ಯಾದಿ) ಎಸೆಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ.
ಹೀಗಾಗಿ ಮುಂದಿನ ಸೀಸನ್ನ ಒಂದು ಪಂದ್ಯಕ್ಕೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಪಂದ್ಯದ ಸಂಭಾವನೆಯಲ್ಲಿ 50% ರಷ್ಟು ದಂಡ ಕೂಡ ಹಾಕಲಾಗಿದ್ದು, 2 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ.
ಈ ಸೀಸನ್ನಲ್ಲಿ ಇದು ಟಿಮ್ ಡೇವಿಡ್ ಅವರ ೩ನೇ ತಪ್ಪು. ಈ ತಪ್ಪು ಮಾಡುವ ಮೂಲಕ ಒಟ್ಟು ಡಿಮೆರಿಟ್ ಅಂಕಗಳು ೫ಕ್ಕೆ ತಲುಪಿದೆ. ಹೀಗಾಗಿ ನಿಯಮಾವಳಿಗಳ ಪ್ರಕಾರ ಸ್ವಯಂಚಾಲಿತವಾಗಿ ಒಂದು ಪಂದ್ಯದ ನಿಷೇಧ ಹೇರಲಾಗಿದೆ.
ನಿಷೇಧದ ಅನ್ವಯ ಟಿಮ್ ಡೇವಿಡ್ ಅವರು ಐಪಿಎಲ್ 2027 ರ ಮೊದಲ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಮುಂದಿನ ಸೀಸನ್ನಲ್ಲಿ ಅವರು ಆರ್ಸಿಬಿ ಪರ ಅಥವಾ ಬೇರೆ ಯಾವುದೇ ಫ್ರಾಂಚೈಸಿ ಪರ ಆಡಿದರೂ ಆ ತಂಡದ ಮೊದಲ ಪಂದ್ಯಕ್ಕೆ ಈ ನಿಷೇಧ ಅನ್ವಯವಾಗುತ್ತದೆ.