ಮುಂಬೈ,,ಜೂ. 15 (DaijiworldNews/AK): ಮೀರ್ಪುರದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿತು. ಈ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಆಸೀಸ್ ತಂಡಕ್ಕೆ ಕೊನೆಯ ಮ್ಯಾಚ್ನಲ್ಲಿ ಬಾಂಗ್ಲಾದೇಶ್ 275 ರನ್ಗಳ ಗುರಿ ನೀಡಿದ್ದರು.

ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಕೂಪರ್ ಕೊನೊಲಿ ಉತ್ತಮ ಆರಂಭ ಒದಗಿಸಿದ್ದರು. ಅಲ್ಲದೆ ಜವಾಬ್ದಾರಿಯುತ ಇನಿಂಗ್ಸ್ ಆಡಿದ ಕೊನೊಲಿ 134 ಎಸೆತಗಳಲ್ಲಿ 149 ರನ್ಗಳ ಭರ್ಜರಿ ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 49.3 ಓವರ್ಗಳಲ್ಲಿ 277 ರನ್ ಗಳಿಸಿ 1 ವಿಕೆಟ್ನ ರೋಚಕ ಜಯ ಸಾಧಿಸಿತು.
ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕಾರಣ ಕೂಪರ್ ಕೊನೊಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಆದರೆ ಈ ಪ್ರಶಸ್ತಿಯನ್ನು ಕೊನೊಲಿ ಬಾಂಗ್ಲಾದೇಶ್ ಆಟಗಾರನಿಗೆ ನೀಡಿದ್ದಾರೆ.
ಸುದೀರ್ಘ ಬ್ಯಾಟಿಂಗ್ ಮಾಡಿದ ಕೂಪರ್ ಕೊನೊಲಿ ತೀವ್ರವಾದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಮತ್ತೊಂದೆಡೆ, ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಲಿಟ್ಟನ್ ದಾಸ್ ಕೂಡ ಬ್ಯಾಟಿಂಗ್ ವೇಳೆ ಇದೇ ರೀತಿಯ ತೀವ್ರ ದೈಹಿಕ ಬಳಲಿಕೆಯಿಂದ ಬಳಲುತ್ತಿದ್ದರು. ಇದಾಗ್ಯೂ ಬ್ಯಾಟಿಂಗ್ ಮುಂದುವರೆಸಿದ್ದ ದಾಸ್ 78 ಎಸೆತಗಳಲ್ಲಿ ಅಜೇಯ 58 ರನ್ ಬಾರಿಸಿದ್ದರು.
ಇನ್ನು ಬ್ಯಾಟಿಂಗ್ ಮುಗಿದ ನಂತರ ಲಿಟ್ಟನ್ ದಾಸ್ಗೆ ಸರಿಯಾಗಿ ನಡೆಯಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರು ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಲಿಟ್ಟನ್ ದಾಸ್ ಬದಲಿಗೆ ನೂರುಲ್ ಹಸನ್ ಗ್ಲೌಸ್ ತೊಟ್ಟು ಕಣಕ್ಕಿಳಿದಿದ್ದರು.
ಈ ಮ್ಯಾಚ್ನಲ್ಲಿ ಪಂದ್ಯ ಪುರುಷ ಪ್ರಶಸ್ತಿ ಗೆದ್ದ ಕೂಪರ್ ಕೊನೊಲಿಗೆ ಪ್ರಾಯೋಜಕರಿಂದ ಒಂದು ಹೊಚ್ಚ ಹೊಸ ‘Vmoto’ ಇ-ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣ, ಕೊನೊಲಿ, ಆ ಬೈಕ್ನ ಕೀಲಿಯನ್ನು ನೇರವಾಗಿ ಬಾಂಗ್ಲಾದೇಶದ ಲಿಟ್ಟನ್ ದಾಸ್ ಕೈಗಿಟ್ಟರು. ಈ ಮೂಲಕ ತನಗೆ ಸಿಕ್ಕ ಇ-ಬೈಕ್ ಅನ್ನು ಆಸ್ಟ್ರೇಲಿಯನ್ ಆಟಗಾರ ಲಿಟ್ಟನ್ ದಾಸ್ಗೆ ಉಡುಗೊರೆಯಾಗಿ ನೀಡಿದ್ದಾರೆ.
ಇದೀಗ ಕೂಪರ್ ಕೊನೊಲಿಯ ಈ ಹೃದಯಸ್ಪರ್ಶಿ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.