ದಂಬುಲ್ಲಾ, ಜೂ. 16 (DaijiworldNews/AA): ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಣ ಪಂದ್ಯದ ಬಳಿಕ ನಡೆದ ದೈಹಿಕ ಘರ್ಷಣೆ ಹಿನ್ನಲೆ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ವಿರುದ್ಧ ಐಸಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯತೆಯಿದೆ.

ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 49.2 ಓವರ್ಗಳಲ್ಲಿ 265 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 50 ಓವರ್ಗಳಲ್ಲಿ 265 ರನ್ಗಳಿಸಿದ್ದು, ಪಂದ್ಯ ಟೈ ಆಗಿತ್ತು.
ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಶ್ರೀಲಂಕಾ ಬ್ಯಾಟರ್ಗಳು 16 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 6 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ 7 ರನ್ಗಳಿಂದ ಸೋಲನ್ನೊಪ್ಪಿಕೊಂಡರು.
ಗೆಲ್ಲುತ್ತಿದ್ದಂತೆ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಪೆವಿಲಿಯನ್ ಕಡೆ ತೆರಳುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಗುರಿಯಾಗಿಸಿಕೊಂಡು ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾ ಅದೇನೋ ಹೇಳಿದ್ದಾರೆ. ಇದರಿಂದ ಕೆರಳಿದ ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಾ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದ್ದಾರೆ.
ಈ ಮಾತಿನ ಚಕಮಕಿ ನಡುವೆ ವೈಭವ್ ಸೂರ್ಯವಂಶಿ ವಿಶೇನ್ ಹಾಲಂಬಾ ಅವರ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ. ತಕ್ಷಣವೇ ಶ್ರೀಲಂಕಾದ ಹಿರಿಯ ವಿಕೆಟ್ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಕೆಲ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದ್ದಾರೆ.
ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈಭವ್ ಸೂರ್ಯವಂಶಿ ನಡೆಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಐಸಿಸಿ ವೈಭವ್ ಸೂರ್ಯವಂಶಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.