ದೆಹಲಿ, ಜು. 08 (DaijiworldNews/AA): ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಅಫ್ಘಾನಿಸ್ತಾನ್ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಶಪೂರ್ ಝದ್ರಾನ್ ಅವರು ಮಂಗಳವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಶಪೂರ್ ಅವರು 'ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' ಎಂಬ ಅಪರೂಪದ ಮತ್ತು ಮಾರಣಾಂತಿಕ ರೋಗನಿರೋಧಕ ಶಕ್ತಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತೀವ್ರವಾದ ಉರಿಯೂತಕ್ಕೆ ಕಾರಣವಾಗುವ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಶಪೂರ್ ಅವರು ಜನವರಿ 2026 ರಿಂದ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಮೇ ತಿಂಗಳಿನಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
"ಶಪೂರ್ ಅಫ್ಘಾನ್ ಕ್ರಿಕೆಟ್ಗೆ ಬಲವಾದ ಬುನಾದಿ ಹಾಕಿಕೊಟ್ಟ ಮಹಾನ್ ಆಟಗಾರ" ಎಂದು ಅವರ ನಿಧನಕ್ಕೆ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ತೀವ್ರ ಸಂತಾಪ ಸೂಚಿಸಿದೆ. ಜೊತೆಗೆ ಮಾಜಿ ಅಂತರರಾಷ್ಟ್ರೀಯ ಕೋಚ್ ರವಿಶಾಸ್ತ್ರಿ, ಅಫ್ಘಾನ್ ಆಟಗಾರರಾದ ಮೊಹಮ್ಮದ್ ನಬಿ, ರಶೀದ್ ಖಾನ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೌಲರ್ ಶಪೂರ್ ಝದ್ರಾನ್ ಅವರು ಜುಲೈ 8 ರಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ ಜನ್ಮದಿನದ ಕೇವಲ ಒಂದು ದಿನ ಮುಂಚಿತವಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.