ಮುಂಬೈ, ಆ. 14 (DaijiworldNews/AK):ಕರ್ನಾಟಕ ತಂಡ ಮುಂಬರುವ ದೇಶೀಯ ಸೀಸನ್ಗೆ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಅದರ ಭಾಗವಾಗಿ ತಂಡಕ್ಕೆ ಮುಖ್ಯ ಕೋಚ್ ಅನ್ನು ನೇಮಕ ಮಾಡಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಟೀಂ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ವಿನಯ್ ಕುಮಾರ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.

ಕರ್ನಾಟಕದ ಅತ್ಯಂತ ಯಶಸ್ವಿ ನಾಯಕರಾಗಿದ್ದ 42 ವರ್ಷದ ವಿನಯ್ ಕುಮಾರ್ ಅವರನ್ನು ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಶಿ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಅವರನ್ನೊಳಗೊಂಡ ಕ್ರಿಕೆಟ್ ಆಡಳಿತ ಸಮಿತಿ ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಮಾಡಿದೆ.
ಈ ಮೊದಲು ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ಯೆರೆ ಗೌಡ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಆ ಸ್ಥಾನವನ್ನು ತುಂಬಲಿದ್ದಾರೆ. ವಿನಯ್ ಕುಮಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸುವುದರ ಜೊತೆಗೆ ಕರ್ನಾಟಕದ ಮಾಜಿ ಬ್ಯಾಟ್ಸ್ಮನ್ ದೀಪಕ್ ಚೌಗುಲೆ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ.