ನವದೆಹಲಿ,ಆ. 15 (DaijiworldNews/AK): ಸುದೀರ್ಘ 5 ದಶಕಗಳ ಬಳಿಕ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಸಜ್ಜಾಗಿದೆ. ವಿಶ್ವದ ಅತ್ಯುತ್ತಮ ಹಾಕಿ ತಂಡಗಳ ನಡುವಿನ ಸೆಣಸಾಟಕ್ಕೆ ಇಂದಿನಿಂದ ಚಾಲನೆ ಸಿಗಲಿದೆ.

ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳು ಹಾಗೂ ಆಟಗಾರರನ್ನು ಹೊಂದಿರುವ ಕ್ರೀಡೆ ಎಂದರೆ ಅದು ಹಾಕಿ. ಈ ಕ್ರೀಡೆಯು ಪ್ರತಿಷ್ಠಿತ ಪಂದ್ಯಾವಳಿ FIH ವಿಶ್ವಕಪ್ನ 16ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದೆ. ಈ ಬಾರಿ ಹಾಕಿ ವಿಶ್ವಕಪ್ ಹೊಸ ಮಾದರಿಯೊಂದಿಗೆ ಆರಂಭವಾಗುತ್ತಿದ್ದು, ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ಆತಿಥ್ಯದಲ್ಲಿ ಪ್ರಾರ೦ಭವಾಗುತ್ತಿದೆ. ಒಟ್ಟು 15 ದಿನಗಳ ಕಾಲ ನಡೆಯಲಿದ್ದು, ಪ್ರಸ್ತುತ ವಿಶ್ವದ ಅತ್ಯುತ್ತಮ 16 ಪುರುಷ ಮತ್ತು 16 ಮಹಿಳಾ ತಂಡಗಳು ಪ್ರಶಸ್ತಿಗಾಗಿ ಹೊರಡಲಿದೆ.
ಇಂದಿನಿಂದ ಆರಂಭವಾಗಲಿರುವ ಈ ಹಾಕಿ ವಿಶ್ವಕಪ್ ಹಬ್ಬ ಆ.30ರವರೆಗೆ ಅಂದರೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಈ ವಿಶ್ವಕಪ್ನಲ್ಲಿ ಪುರುಷರ ವಿಭಾಗದಲ್ಲಿ 16 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಸೇರಿದಂತೆ ಒಟ್ಟು 32 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳು ಸೇರಿ 15 ದಿನಗಳಲ್ಲಿ ಒಟ್ಟು 100 ಪಂದ್ಯಗಳು ನಡೆಯಲಿವೆ.
ಮಹಿಳೆಯರ ವಿಭಾಗದ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್ ತಂಡಗಳು ಮುಖಾಮುಖಿಯಾಗಲಿದ್ದು, ಮಧ್ಯಾಹ್ನ 1.30ಕ್ಕೆ ನೆದರ್ಲೆಂಡ್ಸ್ನ ವಾಗನರ್ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಇನ್ನೂ ಪುರುಷರ ವಿಭಾಗದ ಇಂದಿನ ಪಂದ್ಯದಲ್ಲಿ ಭಾರತ ಮತ್ತು ವೇಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಸಂಜೆ 4:30ಕ್ಕೆ ನೆದರ್ಲೆಂಡ್ಸ್ನ ವಾಗನರ್ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಆಗಸ್ಟ್ 29 ರಂದು ನೆದರ್ಲೆಂಡ್ಸ್ನ ವಾಗನರ್ ಸ್ಟೇಡಿಯಂನಲ್ಲಿ ಮಹಿಳೆಯರ ವಿಭಾಗದ ಫೈನಲ್ ಹಾಗೂ ಆಗಸ್ಟ್ 30 ರಂದು ಬೆಲ್ಜಿಯಂನ ವಾವ್ರೆ ಕ್ರೀಡಾಂಗಣದಲ್ಲಿ ಪುರುಷರ ವಿಭಾಗದ ಫೈನಲ್ ನಡೆಯಲಿದೆ.
ವೇಳಾಪಟ್ಟಿ:
ಈ ಬಾರಿಯ ಹಾಕಿ ವಿಶ್ವಕಪ್ನಲ್ಲಿ ಭಾರತದ ಪುರುಷರ ತಂಡವು ತನ್ನ ಮೊದಲ ಪಂದ್ಯವನ್ನು ಆಗಸ್ಟ್ 15 ರಂದು ಸಂಜೆ 4:30ಕ್ಕೆ ವೇಲ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ನಂತರ ಆಗಸ್ಟ್ 17 ರಂದು ಬಲಿಷ್ಠ ಇಂಗ್ಲೆಂಡ್ ವಿರುದ್ಧ ಹಾಗೂ ಆಗಸ್ಟ್ 19 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸಂಜೆ 6:30ಕ್ಕೆ ಕಣಕ್ಕಿಳಿಯಲಿದೆ.
ಮತ್ತೊಂದೆಡೆ, ಭಾರತದ ಮಹಿಳಾ ತಂಡವು ಆಗಸ್ಟ್ 16 ರಂದು ಸಂಜೆ 4:30ಕ್ಕೆ ಚೀನಾ ವಿರುದ್ಧ ಸೆಣಸುವ ಮೂಲಕ ತನ್ನ ಪಯಣ ಶುರುಮಾಡಲಿದೆ. ಮುಂದುವರಿದು, ಆಗಸ್ಟ್ 18 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಆಗಸ್ಟ್ 20 ರಂದು ಇಂಗ್ಲೆಂಡ್ ವಿರುದ್ಧ ಸಂಜೆ 6:30ಕ್ಕೆ ತನ್ನ ಗ್ರೂಪ್ ಹಂತದ ಪಂದ್ಯಗಳನ್ನು ಆಡಲಿದೆ.