ನವದೆಹಲಿ, ಸೆ. 09 (DaijiworldNews/TA): ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ–ಪಾಕಿಸ್ತಾನ ನಡುವಿನ ಕ್ರೀಡಾ ಸಂಬಂಧಗಳು ಸ್ಥಗಿತಗೊಂಡಿರುವ ನಡುವೆಯೇ, 2027ರ ದಕ್ಷಿಣ ಏಷ್ಯಾ ಫೆಡರೇಷನ್ (SAF) ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ. ಈ ವರದಿ ನಿಜವಾಗಿದ್ದರೆ, 2025ರ ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಎದುರಾಗಲಿದೆ.

2025ರ ಏಪ್ರಿಲ್ 22ರಂದು ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ನಾಗರಿಕರು ಮೃತಪಟ್ಟಿದ್ದರು. ಘಟನೆಯ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಕ್ರೀಡಾ ಸಂಬಂಧಗಳಲ್ಲಿ ಮತ್ತಷ್ಟು ಬಿರುಕು ಉಂಟಾಗಿತ್ತು. ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ದಕ್ಷಿಣ ಏಷ್ಯಾ ಒಲಿಂಪಿಕ್ಸ್ ಅಸೋಸಿಯೇಷನ್ನ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ 2027ರ SAF ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತ ತಾತ್ವಿಕವಾಗಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
2027ರ SAF ಕ್ರೀಡಾಕೂಟವು ಏಪ್ರಿಲ್ 4ರಿಂದ 11ರವರೆಗೆ ನಡೆಯುವ ಸಾಧ್ಯತೆ ಇದೆ. ಭಾರತದಿಂದ ಎಷ್ಟು ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂಬ ಅಂತಿಮ ವಿವರಗಳನ್ನು 2027ರ ಜನವರಿಯಲ್ಲಿ ತಿಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಭಾರತದ ಕೇಂದ್ರ ಸರ್ಕಾರ ಅಥವಾ ವಿದೇಶಾಂಗ ಸಚಿವಾಲಯ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಭಾರತದ ಭಾಗವಹಿಸುವಿಕೆ ಇನ್ನೂ ಅಂತಿಮಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ.
ಪಾಕಿಸ್ತಾನ ಕೊನೆಯ ಬಾರಿ 2004ರಲ್ಲಿ ಇಸ್ಲಾಮಾಬಾದ್ನಲ್ಲಿ SAF ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದೀಗ ಸುಮಾರು 22 ವರ್ಷಗಳ ಬಳಿಕ ಮತ್ತೆ ಪಾಕಿಸ್ತಾನ ಬಹುಕ್ರೀಡಾ ಅಂತಾರಾಷ್ಟ್ರೀಯ ಕೂಟಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. 2027ರ ಆವೃತ್ತಿಯಲ್ಲಿ ಒಟ್ಟು 28 ಕ್ರೀಡಾ ವಿಭಾಗಗಳು ನಡೆಯುವ ನಿರೀಕ್ಷೆಯಿದ್ದು, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ನಗರಗಳು ಆತಿಥ್ಯ ವಹಿಸಲಿವೆ. ಇಸ್ಲಾಮಾಬಾದ್ನಲ್ಲಿ ಸ್ಕ್ವಾಷ್, ಟೆನಿಸ್ ಮತ್ತು ಮಾರ್ಷಲ್ ಆರ್ಟ್ಸ್ ಸೇರಿದಂತೆ 15 ಕ್ರೀಡಾ ವಿಭಾಗಗಳು ನಡೆಯಲಿವೆ. ಲಾಹೋರ್ನಲ್ಲಿ ಕ್ರಿಕೆಟ್, ಹಾಕಿ, ಈಜು ಸೇರಿದಂತೆ 10 ಕ್ರೀಡೆಗಳಿಗೆ ಆತಿಥ್ಯ ನೀಡಲಾಗಿದ್ದು, ಪೇಶಾವರ್ನಲ್ಲಿ ಮೂರು ಕ್ರೀಡಾ ವಿಭಾಗಗಳು ನಡೆಯಲಿವೆ.
ಭಾರತ ಭಾಗವಹಿಸುವ ಸಾಧ್ಯತೆಯ ವರದಿ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನದಲ್ಲಿ SAF ಕ್ರೀಡಾಕೂಟದ ಸಿದ್ಧತೆಗಳು ಚುರುಕುಗೊಂಡಿವೆ ಎಂದು ವರದಿಯಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸುವಂತೆ ಕೇಂದ್ರ ಹಾಗೂ ಪ್ರಾಂತೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಿದೇಶಿ ಕ್ರೀಡಾಪಟುಗಳು, ಅಧಿಕಾರಿಗಳು, ಪ್ರೇಕ್ಷಕರು ಮತ್ತು ಅಂತಾರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಪಾಕಿಸ್ತಾನದಲ್ಲಿರುವ ಸಂಪೂರ್ಣ ಅವಧಿಯಲ್ಲಿ ಸಮಗ್ರ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪಹಲ್ಗಾಮ್ ದಾಳಿಯ ನಂತರ ಭಾರತ–ಪಾಕಿಸ್ತಾನ ಸಂಬಂಧಗಳು ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ, SAF ಕ್ರೀಡಾಕೂಟದಲ್ಲಿ ಭಾರತ ಭಾಗವಹಿಸುವ ವಿಚಾರ ಮಹತ್ವ ಪಡೆದುಕೊಂಡಿದೆ.
ಸದ್ಯ ಪಾಕಿಸ್ತಾನಿ ಮಾಧ್ಯಮಗಳ ವರದಿಯಲ್ಲಿ ಭಾರತದ ತಾತ್ವಿಕ ಒಪ್ಪಿಗೆಯ ಬಗ್ಗೆ ಮಾಹಿತಿ ಹೊರಬಂದಿದ್ದರೂ, ಭಾರತ ಸರ್ಕಾರದಿಂದ ಅಧಿಕೃತ ದೃಢೀಕರಣ ಸಿಗಬೇಕಿದೆ. ಹೀಗಾಗಿ 2027ರಲ್ಲಿ ಭಾರತೀಯ ಕ್ರೀಡಾಪಟುಗಳು ಪಾಕಿಸ್ತಾನಕ್ಕೆ ತೆರಳಲಿದ್ದಾರೆಯೇ ಎಂಬ ಕುತೂಹಲಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ.