ಮುಂಬೈ, ಸೆ. 10 (DaijiworldNews/AK): ಭಾರತ ತಂಡದ ಯುವ ವೇಗಿ ಹರ್ಷಿತ್ ರಾಣಾ ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರ ಬಿದ್ದಿದ್ದಾರೆ.

ಸೆಪ್ಟೆಂಬರ್ 13 ರಿಂದ ನವದೆಹಲಿಯಲ್ಲಿ ಆರಂಭವಾಗಲಿರುವ ಈ ಸರಣಿಗೆ 24 ವರ್ಷದ ರಾಣಾ ಸಂಪೂರ್ಣ ಫಿಟ್ನೆಸ್ ಸಾಧಿಸದ ಕಾರಣ, ಅವರಿಗೆ ಮತ್ತಷ್ಟು ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.
ಕಳೆದ ಜುಲೈನಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ಹರ್ಷಿತ್ ರಾಣಾ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರು. ಇದಕ್ಕೂ ಮುನ್ನ ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಅವರು ಟಿ20 ವಿಶ್ವಕಪ್ ಮತ್ತು ಐಪಿಎಲ್ ಟೂರ್ನಿಗಳಿಂದಲೂ ಹೊರಗುಳಿದಿದ್ದರು. ಜೂನ್ ಮತ್ತು ಜುಲೈ ತಿಂಗಳಲ್ಲಿ ತಂಡಕ್ಕೆ ಮರಳಿದ್ದ ಅವರಿಗೆ ಈ ಹ್ಯಾಮ್ಸ್ಟ್ರಿಂಗ್ ಗಾಯ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಹೀಗಾಗಿ ಸೆಪ್ಟೆಂಬರ್ 13 ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯಿಂದ ಹರ್ಷಿತ್ ರಾಣಾ ಅವರನ್ನು ಹೊರಗಿಡಲಾಗಿದೆ. ಅವರ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಪ್ರಿನ್ಸ್ ಯಾದವ್ ಅವರನ್ನು ಟೀಮ್ ಇಂಡಿಯಾಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.
ಅಫ್ಘಾನಿಸ್ತಾನ್ ಸರಣಿಗೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ.