ಕೊಚ್ಚಿ, ಸೆ.12 (DaijiworldNews/TA): ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ತಂದೆ ವಿ. ಶಾಂತಕುಮಾರನ್ ನಾಯರ್ ಅವರು ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಶಾಂತಕುಮಾರನ್ ಅವರನ್ನು ಕೇರಳದ ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿದ್ದ ಶಾಂತಕುಮಾರನ್ ಅವರು ಕೇರಳದಲ್ಲಿ ವಲಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ಕೋತಮಂಗಲಂ ನಿವಾಸಿಯಾಗಿದ್ದ ಅವರು ಶ್ರೀಶಾಂತ್ ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ.
ತಂದೆಯ ನಿಧನದ ಸುದ್ದಿಯನ್ನು ಶ್ರೀಶಾಂತ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಶನಿವಾರ ಆಸ್ಪತ್ರೆಯಲ್ಲಿಯೇ ಮೃತದೇಹವನ್ನು ಇರಿಸಲಾಗಿದ್ದು, ಬಳಿಕ ಕೋತಮಂಗಲಂನಲ್ಲಿರುವ ಕುಟುಂಬದ ಮನೆಗೆ ಕೊಂಡೊಯ್ಯಲಾಗುತ್ತದೆ. ಸೆಪ್ಟೆಂಬರ್ 13ರ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕುಟುಂಬದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.
ಶ್ರೀಶಾಂತ್ ಅವರ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಬೆಂಬಲವಾಗಿ ನಿಂತಿದ್ದ ಶಾಂತಕುಮಾರನ್, 2013ರ ಐಪಿಎಲ್ ಸ್ಪಾಟ್ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಪುತ್ರ ಸಿಲುಕಿಕೊಂಡಿದ್ದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗಳಿಂದ ಸುದ್ದಿಯಾಗಿದ್ದರು. ತಮ್ಮ ಪುತ್ರನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದ ಅವರು, ಆಗಿನ ಟೀಂ ಇಂಡಿಯಾ ಆಟಗಾರರಾದ ಎಂ.ಎಸ್. ಧೋನಿ ಮತ್ತು ಹರ್ಭಜನ್ ಸಿಂಗ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರು. ತಮ್ಮ ಮಗನ ವೃತ್ತಿಜೀವನವನ್ನು ಹಾಳುಮಾಡಲು ಅವರು ಬಯಸಿದ್ದರು ಎಂದು ಶಾಂತಕುಮಾರನ್ ಹೇಳಿಕೆ ನೀಡಿದ್ದರು. ಬಳಿಕ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದರು.
43 ವರ್ಷದ ಶ್ರೀಶಾಂತ್ 2022ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಭಾರತ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 87, 75 ಹಾಗೂ 7 ವಿಕೆಟ್ಗಳನ್ನು ಪಡೆದಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು.
2013ರ ಐಪಿಎಲ್ ಸ್ಪಾಟ್ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪ ಎದುರಿಸಿದ್ದ ಶ್ರೀಶಾಂತ್ ಅವರನ್ನು 2015ರಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಆದರೆ ಬಳಿಕ ಅವರು ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಸಾಧ್ಯವಾಗಲಿಲ್ಲ. ಕ್ರಿಕೆಟ್ನಿಂದ ನಿವೃತ್ತರಾದ ಬಳಿಕವೂ ತಮ್ಮ ಹೇಳಿಕೆಗಳು ಹಾಗೂ ವಿವಿಧ ವಿಚಾರಗಳ ಕುರಿತ ಪ್ರತಿಕ್ರಿಯೆಗಳಿಂದ ಶ್ರೀಶಾಂತ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.