ನವದೆಹಲಿ, ಸೆ. 13 (DaijiworldNews/TA): ಐಪಿಎಲ್ ಸೀಸನ್-20ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಭರ್ಜರಿ ಸಿದ್ಧತೆ ಆರಂಭಿಸಿದ್ದು, ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಮುಂಬರುವ ಆವೃತ್ತಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ, ವಿಶ್ವಕಪ್ ಹೀರೊ ಯುವರಾಜ್ ಸಿಂಗ್, ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ಶ್ರೀಲಂಕಾದ ದಿಗ್ಗಜ ವೇಗಿ ಚಾಮಿಂಡ ವಾಸ್ ಡೆಲ್ಲಿ ತಂಡದ ಕೋಚಿಂಗ್ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಕೋಚಿಂಗ್ ಸಿಬ್ಬಂದಿಯ ಜವಾಬ್ದಾರಿಗಳನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
ಮುಖ್ಯ ಕೋಚ್: ಸೌರವ್ ಗಂಗೂಲಿ
ಸಹಾಯಕ ಕೋಚ್: ಯುವರಾಜ್ ಸಿಂಗ್
ವೇಗದ ಬೌಲಿಂಗ್ ಕೋಚ್: ಚಾಮಿಂಡ ವಾಸ್
ಸ್ಪಿನ್ ಬೌಲಿಂಗ್ ಕೋಚ್: ಅಮಿತ್ ಮಿಶ್ರಾ
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು JSW ಗ್ರೂಪ್ ಮತ್ತು GMR ಗ್ರೂಪ್ನ 50:50 ಜಂಟಿ ಮಾಲೀಕತ್ವದಲ್ಲಿದೆ. ಉಭಯ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಪುರುಷರ ಐಪಿಎಲ್ ತಂಡದ ಕ್ರಿಕೆಟ್ ಕಾರ್ಯಾಚರಣೆಯ ಜವಾಬ್ದಾರಿಯನ್ನು ತಲಾ ಎರಡು ವರ್ಷಗಳ ಅವಧಿಗೆ ಸರದಿಯ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ. 2025 ಮತ್ತು 2026ರ ಐಪಿಎಲ್ ಸೀಸನ್ಗಳಲ್ಲಿ ತಂಡದ ಕಾರ್ಯಾಚರಣೆಯ ಜವಾಬ್ದಾರಿ GMR ಗ್ರೂಪ್ನಲ್ಲಿತ್ತು. ಈ ಅವಧಿಯಲ್ಲಿ ಹೇಮಂಗ್ ಬದಾನಿ ಮುಖ್ಯ ಕೋಚ್ ಹಾಗೂ ವೇಣುಗೋಪಾಲ್ ರಾವ್ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಇದೀಗ 2027 ಮತ್ತು 2028ರ ಸೀಸನ್ಗಳಿಗಾಗಿ JSW ಗ್ರೂಪ್ ತಂಡದ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಇದರ ಬೆನ್ನಲ್ಲೇ ಕೋಚಿಂಗ್ ಸಿಬ್ಬಂದಿಯಲ್ಲೂ ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎನ್ನಲಾಗಿದೆ. ಫ್ರಾಂಚೈಸಿ ಈ ನೇಮಕಾತಿಗಳನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸದಿದ್ದರೂ, ಶ್ರೀಲಂಕಾದ ಮಾಜಿ ವೇಗಿ ಚಾಮಿಂಡ ವಾಸ್ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ತಂಡದ ಪ್ರಿ-ಸೀಸನ್ ಟ್ರಯಲ್ಸ್ನಲ್ಲಿ ವಾಸ್ ಭಾಗವಹಿಸಿದ್ದು, ಯುವ ಪ್ರತಿಭೆಗಳ ಪ್ರದರ್ಶನವನ್ನು ಗಮನಿಸುತ್ತಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, ಮೆಗಾ ಹರಾಜಿಗೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಸೀಸನ್ಗಾಗಿ ಮಹತ್ವದ ಯೋಜನೆ ರೂಪಿಸುತ್ತಿದೆ. ಕ್ರಿಕೆಟ್ನ ದಿಗ್ಗಜರಾದ ಗಂಗೂಲಿ, ಯುವರಾಜ್, ವಾಸ್ ಮತ್ತು ಅಮಿತ್ ಮಿಶ್ರಾ ಅವರ ಅನುಭವ ತಂಡಕ್ಕೆ ಎಷ್ಟರ ಮಟ್ಟಿಗೆ ನೆರವಾಗಲಿದೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.