ಮುಂಬೈ, ಸೆ.15 (DaijiworldNews/AK): ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್ ಭ್ರಷ್ಟಾಚಾರ ಆರೋಪ ಹೊತ್ತು ಜೈಲಿನಲ್ಲಿದ್ದಾರೆ.

ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಪಾಕ್ ಸರ್ಕಾರ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ ಎಂಬ ಆರೋಪವನ್ನು ಇಮ್ರಾನ್ ಮಕ್ಕಳು ಹಾಗೂ ಕುಟುಂಬದವರು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಪಾಕ್ ಸರ್ಕಾರ ಮಾತ್ರ ಇಮ್ರಾನ್ ಅವರ ಬಗ್ಗೆ ಹೊರ ಜಗತ್ತಿಗೆ ಯಾವುದೇ ಸುಳಿವನ್ನು ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಕೆಲವು ದಿನಗಳ ಹಿಂದೆ ಅಂದರೆ ಆಗಸ್ಟ್ 23 ರಂದು, 22 ಮಾಜಿ ಅಂತಾರಾಷ್ಟ್ರೀಯ ನಾಯಕರು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಪತ್ರ ಬರೆದು, ಇಮ್ರಾನ್ ಖಾನ್ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದರು.
ಇದೀಗ ಅವರ ಪಟ್ಟಿಗೆ ಆಸ್ಟ್ರೇಲಿಯಾದ 7 ದಿಗ್ಗಜ ಕ್ರಿಕೆಟಿಗರು ಸೇರಿಕೊಂಡಿದ್ದಾರೆ. ಇಮ್ರಾನ್ ಖಾನ್ ಅವರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಆಸ್ಟ್ರೇಲಿಯಾದ ಏಳು ಮಾಜಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ 7 ಮಾಜಿ ಕ್ರಿಕೆಟಿಗರು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಅವರನ್ನು ಸಂಪರ್ಕಿಸಿ ಖಾನ್ ಅವರ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಂಗ್ ಅವರಿಗೆ ಬರೆದ ಪತ್ರದಲ್ಲಿ ಅಲನ್ ಬಾರ್ಡರ್, ಗ್ರೆಗ್ ಚಾಪೆಲ್, ಇಯಾನ್ ಚಾಪೆಲ್, ಬೆಲಿಂಡಾ ಕ್ಲಾರ್ಕ್, ಕಿಮ್ ಹ್ಯೂಸ್, ಮಾರ್ಕ್ ಟೇಲರ್ ಮತ್ತು ಸ್ಟೀವ್ ವಾ ಸೇರಿದಂತೆ ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದ ಹಲವಾರು ಪ್ರಮುಖ ವ್ಯಕ್ತಿಗಳ ಸಹಿಗಳಿವೆ.
ತಮ್ಮ ಪತ್ರದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕರು, ಇಮ್ರಾನ್ ಖಾನ್ ವಿರುದ್ಧದ ಕಾನೂನು ಅಥವಾ ರಾಜಕೀಯ ಪ್ರಕರಣದ ಬಗ್ಗೆ ಯಾವುದೇ ನಿಲುವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಬದಲಿಗೆ ಬಂಧನದಲ್ಲಿರುವ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಪತ್ರದಲ್ಲಿ, ‘ಇಮ್ರಾನ್ ಖಾನ್ ಪಾಕಿಸ್ತಾನವನ್ನು ತನ್ನ ಏಕೈಕ ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದವರು. ಅಲ್ಲದೆ ಪ್ರಧಾನಿಯಾಗಿ ತಮ್ಮ ದೇಶವನ್ನು ಸಹ ಮುನ್ನಡೆಸಿದವರು. ಆಸ್ಟ್ರೇಲಿಯನ್ನರು ಅವರನ್ನು ಕ್ರಿಕೆಟಿಗರಾಗಿ ಗೌರವಿಸುತ್ತಾರೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.