ಮುಂಬೈ, ಏ 23 (DaijiworldNews/DB): ತಪ್ಪು ಎಲ್ಲರಿಂದಲೂ ನಡೆಯುತ್ತದೆ. ಕೆಲವೊಮ್ಮೆ ಅಂಪೈರ್ಗಳಿಂದ ತಿಳಿದೋ ತಿಳಿಯದೆಯೋ ಆಗುವ ತಪ್ಪುಗಳನ್ನು ನಾವು ಅರ್ಥ ಮಾಡಿಕೊಂಡು ಕ್ರೀಡಾಸ್ಪೂರ್ತಿ ಮೆರೆಯಬೇಕು ಎಂದು ರಿಷಬ್ ಪಂತ್ಗೆ ಮಾಜಿ ಕ್ರಿಕೆಟಿಗ ವಸೀಂ ಜಾಫರ್ ಬುದ್ದಿ ಮಾತು ಹೇಳಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಇದರಲ್ಲಿ ಆಟದ ಕೊನೆಯಲ್ಲಿ ನೋ ಬಾಲ್ ವಿವಾದ ತಾರಕಕ್ಕೇರಿ, ಆಟಗಾರರನ್ನು ರಿಷಭ್ ಪಂತ್ ವಾಪಾಸ್ ಕರೆದುಕೊಂಡಿದ್ದರು. ಒಂದು ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದವರು ತೀವ್ರ ವಾಗ್ವಾದಕ್ಕೆ ಇಳಿದಿದ್ದರು. ಈ ನಿಟ್ಟಿನಲ್ಲಿ ಜಾಫರ್ ಪ್ರತಿಕ್ರಿಯಿಸಿ, ಅಂಪೈರ್ಗಳು ಕೆಲವೊಮ್ಮೆ ತಪ್ಪು ಮಾಡುತ್ತಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸುವ ಬದಲಾಗಿ ಪಂದ್ಯ ನಡೆಯಲು ಅನುವು ಮಾಡಿಕೊಡಬೇಕು ಎಂದು ಜಾಫರ್ ಹೇಳಿದ್ದಾರೆ.
ಆದರೆ ನೋ ಬಾಲ್ ವಿವಾದದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಅಂಪೈರ್ಗಳು ಮೂರನೇ ಅಂಪೈರ್ ಸಲಹೆ ಪಡೆಯದೇ ಇರುವುದು ಅವರ ಅಹಂಕಾರವನ್ನು ತೋರಿಸುತ್ತಿತ್ತು. ತಂತ್ರಜ್ಞಾನಗಳ ಮೂಲಕವಾದರೂ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬಹುದಿತ್ತು ಎಂಬುದಾಗಿ ಆಸ್ಟ್ರೇಲಿಯನ್ ಆಲ್ರೌಂಡರ್ ಬೆನ್ ಕಟ್ಟಿಂಗ್ ಅಭಿಪ್ರಾಯಿಸಿದ್ದಾರೆ.