ನವದೆಹಲಿ, ಏ 29 (DaijiworldNews/DB): ತಮ್ಮ ಕ್ರಿಕೆಟ್ ಬದುಕಿನ ಬಗ್ಗೆ ಮೆಲುಕು ಹಾಕಿಕೊಂಡಿರುವ ಬೌಲರ್ ದಾನಿಶ್ ಕನೇರಿಯಾ ಅವರು ಪಾಕ್ ಆಟಗಾರ ಶಾಹಿದ್ ಅಫ್ರಿದಿ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನಾನು ಹಿಂದೂ ಆಗಿರುವ ಕಾರಣಕ್ಕೆ ನನ್ನ ವಿರುದ್ದ ಯಾವಾಗಲೂ ಆಫ್ರಿದಿ ಪಿತೂರಿ ನಡೆಸುತ್ತಿದ್ದರು ಎಂದವರು ಅಸಮಾಧಾನ ಹೊರ ಹಾಕಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ಗುರುವಾರ ನೀಡಿದ ಸಂದರ್ಶನದ ವೇಳೆ ಕನೇರಿಯಾ ಈ ಆರೋಪ ಮಾಡಿದ್ದು, ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಅಫ್ರಿದಿ ಅವರು ನಾನು ಪಾಕ್ ತಂಡದಲ್ಲಿ ಇರುವಷ್ಟು ದಿನವೂ ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು. ನನ್ನನ್ನು ಬೆಂಚ್ ಮೇಲೆ ಇರಿಸುತ್ತಿದ್ದರು. ಏಕದಿನ ಪಂದ್ಯಾವಳಿಗಳಲ್ಲಿ ಆಡಲು ಅವರು ಬಿಡುತ್ತಿರಲಿಲ್ಲ. ನಾನು ಹಿಂದೂ ಎನ್ನುವ ಏಕೈಕ ಕಾರಣಕ್ಕೆ ಆಫ್ರಿದಿ ಇದನ್ನೆಲ್ಲ ಮಾಡುತ್ತಿದ್ದರು ಎಂದು ಅಸಮಾಧಾನಗೊಂಡರು.
ಆದರೆ ಶೋಯೆಬ್ ಅಖ್ತರ್ ಅವರು ನನ್ನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದರು. ಅಲ್ಲದೆ ಅದನ್ನು ಬಹಿರಂಗವಾಗಿಯೇ ಹೇಳಿದ್ದರು. ಹಿಂದೂ ಎನ್ನುವ ಕಾರಣಕ್ಕೆ ನಾನು ಪಾಕ್ ತಂಡದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಅವರು ಎಳೆ ಎಳೆಯಾಗಿ ಹೊರಗೆಳೆದಿದ್ದರು. ಅವರಿಗೆ ನಾನೆಂದೂ ಅಭಾರಿಯಾಗಿದ್ದೇನೆ ಎಂದು ಶೋಯೆಬ್ ಬಗ್ಗೆ ಇದೇ ವೇಳೆ ಕನೇರಿಯಾ ಮೆಚ್ಚುಗೆಯ ಮಾತುಗಳನ್ನಾಡಿದರು.
ಶೋಯೆಬ್ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಮನಸ್ಸುಳ್ಳವರು. ಆದರೆ ಆನಂತರ ಅಧಿಕಾರಿಗಳ ಒತ್ತಡದಿಂದಾಗಿ ಅವರು ಮಾತನಾಡುವುದನ್ನೇ ನಿಲ್ಲಿಸಿದ್ದರು.
ನಾನು ಪಾಕ್ ತಂಡದಲ್ಲಿರುವುದು ಅವರಿಗೆ ಇಷ್ಟವಿರಲಿಲ್ಲ. ಅದಕ್ಕೇ ಇತರ ಆಟಗಾರರ ಜೊತೆ ನನ್ನ ಬಗ್ಗೆ ಇಲ್ಲಸಲ್ಲದ ಮಾತಾಡುತ್ತಿದ್ದರು. ಆದರೆ ನಾನು ಕ್ರಿಕೆಟ್ ನನ್ನ ಜೀವಾಳವೆಂದು ತಿಳಿದಿದ್ದೆ. ನಾನು ಯಾವುದೇ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿಲ್ಲ ಎಂದು ಇದೇ ವೇಳೆ ಕರಾಚಿ ಮೂಲದ ಆಟಗಾರ ಕನೇರಿಯಾ ಅವರು ಸ್ಪಷ್ಟಪಡಿಸಿದರು.