ಮುಂಬೈ, ಮೇ 02 (DaijiworldNews/DB): ಐಪಿಎಲ್ಗೆ ಪಾದಾರ್ಪಣೆ ಮಾಡಿದ ಬೆನ್ನಲ್ಲೇ ಉತ್ತಮ ಬೌಲಿಂಗ್ ಮಾಡಿದ ಕುಮಾರ್ ಕಾರ್ತಿಕೇಯ ಸಾಧನೆಗೆ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಫುಲ್ ಖುಷ್ ಆಗಿದ್ದಾರೆ. ಎಂದೆಂದಿಗೂ ಹೀಗೇ ಶೈನ್ ಆಗಿ ಎಂದು ನೀತಾ ಹಾರೈಸಿದ್ದಾರೆ.
ಕುಮಾರ್ ಕಾರ್ತಿಕೇಯಗೆ ಇದು ಚೊಚ್ಚಲ ಐಪಿಎಲ್. ಮೊಹಮ್ಮದ್ ಅರ್ಷದ್ ಖಾನ್ ಗಾಯಗೊಂಡ ಹಿನ್ನೆಲೆಯಲ್ಲಿ ಅವರ ಬದಲಿಗೆ ಕಳೆದ ವಾರವಷ್ಟೇ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದ ಅವರು, ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಕಾರಣರಾಗಿ ಮಿಂಚಿದ್ದಾರೆ. 4 ಓವರ್ಗಳ ದಾಳಿಯಲ್ಲಿ ಎದುರಾಳಿಗೆ ಕೇವಲ 19 ರನ್ ನೀಡಿ ಔಟಾಗಿಸಿದರು. ಅಪಾಯಕಾರಿ ಬ್ಯಾಟರ್ ಎಂದೇ ಖ್ಯಾತರಾಗಿರುವ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪತನಗೊಳ್ಳುವಲ್ಲಿ ಪ್ರಮುಖ ಕಾರಣಕರ್ತರಾದರು. ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಮುಂಬೈ ಇಂಡಿಯನ್ಸ್ ಈ ಬಾರಿ ಕಾರ್ತಿಕೇಯ ಅವರಿಂದಾಗಿ ಗೆಲುವಿನ ನಗೆ ಬೀರಿತ್ತು. ಚೊಚ್ಚಲ ಪಂದ್ಯದಲ್ಲಿ ಗಮನಾರ್ಹ ನಿರ್ವಹಣೆ ತೋರಿದ ಕಾರ್ತಿಕೇಯ ಅವರ ಸಾಧನೆಗೆ ಸ್ವತಃ ಪ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವತಃ ನೀತಾ ಅಂಬಾನಿಯವರೇ ಕಾರ್ತಿಕೇಯಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ತುಂಬಾ ಚೆನ್ನಾಗಿ ಆಡಿದ್ದೀರಿ. ಯಾವಾಗಲೂ ಹೀಗೆ ಶೈನ್ ಆಗುತ್ತಿರಿ ಎಂದು ನೀತಾ ಅಂಬಾನಿ ಹೇಳಿದ್ದಾರೆ.