ಮುಂಬೈ, ಮೇ 07 (DaijiworldNews/DB): ಮುಂಬೈ ಇಂಡಿಯನ್ಸ್ ಪರ ಆಡುವುದರ ಮೂಲಕ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಲೋಕಕ್ಕೆ ಅಧಿಕೃತ ಪಾದಾರ್ಪಣೆ ಮಾಡಲಿದ್ದಾರೆಯೇ? ಆ ತಂಡದ ಕೋಚ್ ನೀಡಿರುವ ಹೇಳಿಕೆಯೊಂದು ಅರ್ಜುನ್ ಆಡುವುದನ್ನು ಖಚಿತಪಡಿಸುವಂತಿದೆ.
ಮುಂಬೈ ಇಂಡಿಯನ್ಸ್ ಕೋಚ್ ಆಗಿರುವ ಮಹೇಲ ಜಯವರ್ಧನೆ ಮಾತನಾಡುತ್ತಾ, ಕೆಲವು ಯುವ ಆಟಗಾರರು ಈಗಾಗಲೇ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸಮಯಕ್ಕೆ ಅನುಗುಣವಾಗಿ ಅರ್ಜುನ್ ತೆಂಡೂಲ್ಕರ್ ಅವರನ್ನೂ ಆಯ್ಕೆ ಮಾಡಿಕೊಳ್ಳಲು ಚಿಂತಿಸಲಾಗುತ್ತಿದೆ. ಆದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕಾಲ ಇನ್ನಷ್ಟೆ ಬರಬೇಕಿದೆ ಎಂದು ಹೇಳಿದ್ದರು. ಕೋಚ್ ನೀಡಿರುವ ಈ ಹೇಳಿಕೆ ಇದೇ ಐಪಿಎಲ್ನಲ್ಲಿ ಅರ್ಜುನ್ ಆಡುವುದು ಬಹುತೇಕ ಖಚಿತ ಎಂಬರ್ಥದಲ್ಲಿಯೇ ಇದೆ. ಆದರೆ ಅವರ ಹೇಳಿಕೆಯ ಅಂತರಾಳ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಕೂಡಾ ಆಗಿದ್ದಾರೆ. ಹೀಗಿದ್ದರೂ, ಈ ಐಪಿಎಲ್ನಲ್ಲಿ ಆಡಲು ಅವರ ಪುತ್ರ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ಸಿಕ್ಕಿರಲಿಲ್ಲ. ಈ ನಡುವೆ ನಾಯಕ ರೋಹಿತ್ ಶರ್ಮಾ ಸೇರಿದಂತೆ ತಂಡದಲ್ಲಿರುವ ಕೆಲವು ಹಿರಿಯ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದರು. ಇದರಿಂದಾಗಿ ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್ನಿಂದ ಹೊರ ಬಿದ್ದ ಮೊದಲ ತಂಡವೆಂಬ ಅಪಖ್ಯಾತಿಗೆ ಒಳಗಾಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಮಾತ್ರ ರಾಜಸ್ಥಾನ್ ರಾಯಲ್ಸ್ ವಿರುದ್ದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ನಗೆ ಬೀರಿತ್ತು. ಇದೇ ಉತ್ಸಾಹವನ್ನು ಗುಜರಾತ್ ತಂಡದ ವಿರುದ್ದವೂ ತೋರ್ಪಡಿಸಲಿದ್ದೇವೆ ಎಂದು ಕೋಚ್ ಹೇಳಿಕೊಂಡಿದ್ದರು