ಮುಂಬೈ, ಮೇ 08 (DaijiworldNews/DB): ತಾಯಂದಿರ ದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಹಲವರು ನಾನಾ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ತಮ್ಮ ಜರ್ಸಿಯಲ್ಲಿ ತಾಯಂದಿರ ಹೆಸರು ಬರೆದು ಆಡುವ ಮೂಲಕ ಕ್ರಿಕೆಟ್ ಕ್ರೀಡಾಂಗಣದಿಂದ ತಾಯಂದಿರಿಗೆ ವಿಶೇಷ ಉಡುಗೆ ನೀಡಿದ್ದಾರೆ.
ಮೇ 8ರಂದು ತಾಯಂದಿರ ದಿನ. ಹಲವರು ಈ ದಿನದಂದು ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡಿ ತಾಯಂದಿರನ್ನು ಖುಷಿ ಪಡಿಸುತ್ತಾರೆ. ಕೇಕ್ ಕಟ್ಟಿಂಗ್, ತಾಯಿಗೆ ವಿಶೇಷ ಉಡುಗೊರೆ ನೀಡುವುದು, ಸಾಮಾಜಿಕ ಜಾಲತಾಣಗಳ ಮುಖಾಂತರ ಶುಭಾಶಯ ಕೋರುವುದು...ಇನ್ನೂ ಏನೇನೋ. ಆದರೆ ಈ ವಿಶೇಷ ದಿನದಂದು ತಾಯಂದಿರನ್ನು ಭೇಟಿ ಮಾಡಲು ಸಾಧ್ಯವಾಗದವರು ದೂರದಿಂದಲೇ ತಾಯಿಗೆ ಶುಭಾಶಯ ತಿಳಿಸಿ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ಸಂತೃಪ್ತಿಗೊಳಿಸುತ್ತಾರೆ. ಅಂತಹುದೇ ಒಂದು ವಿಶೇಷವನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಮಾಡಿದ್ದಾರೆ.
ಶನಿವಾರ ಲಕ್ನೋ ತಂಡ ಮತ್ತು ಕೋಲ್ಕತಾ ನೈಟ್ರೈಡರ್ ತಂಡದ ನಡುವೆ ಪಂದ್ಯ ನಡೆದಿತ್ತು. ಲಕ್ನೋ ತಂಡದ ಆಟಗಾರರೆಲ್ಲರೂ ಈ ಪಂದ್ಯದಲ್ಲಿ ತಮ್ಮ ತಾಯಂದಿರ ಹೆಸರು ಇರುವ ಜರ್ಸಿ ಧರಿಸಿ ಆಡಿ ಗಮನ ಸೆಳೆದರು. ಅಲ್ಲದೆ ಜರ್ಸಿಯ ಬಣ್ಣ ತಿಳಿ ನೀಲಿಯ ಬದಲಾಗಿ ಬೂದು ಬಣ್ಣದ ಜರ್ಸಿಯಲ್ಲಿ ಕಿತ್ತಳೆ ಬಣ್ಣದಲ್ಲಿ ಸಂಖ್ಯೆ ಮತ್ತು ತಾಯಂದಿರ ಹೆಸರು ನಮೂದಿಸಲಾಗಿತ್ತು.
ಈ ಬಗ್ಗೆ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ’ದಿಸ್ ವನ್ಸ್ ಫಾರ್ ಯು ಮಾ.’ ಎಂದು ಬರೆಯಲಾಗಿದೆ.