ನವದೆಹಲಿ, ಮೇ 16 (DaijiworldNews/DB): ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡಕ್ಕೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಥೈಲ್ಯಾಂಡ್ ರಾಷ್ಟ್ರದ ಬ್ಯಾಂಕಾಕ್ ಇಂಪ್ಯಾಕ್ಟ್ ಅರೆನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಥಾಮಸ್ ಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ವಿಶೇಷವೆಂದರೆ 14 ಬಾರಿ ಚಾಂಪಿಯನ್ ಆಗಿ ಬೀಗಿದ್ದ ಇಂಡೋನೇಷ್ಯಾವನ್ನು 3-0 ಅಂತರದಿಂದ ಭಾರತ ತಂಡ ಮಣಿಸಿತ್ತು. ಭಾರತ ತಂಡದ ಈ ಸಾಧನೆಗೆ ಪ್ರಧಾನಿ ಮೋದಿಯವರು ಅಭಿನಂದನೆ ಸಲ್ಲಿಸಿದ್ದರು. ಅಲ್ಲದೆ, ತಂಡದ ಶ್ರಮವನ್ನು ಶ್ಲಾಘಿಸಿ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಒಂದು ಕೋಟಿ ರೂ.ಗಳನ್ನು ಘೋಷಿಸಿ ಇನ್ನಷ್ಟು ಸ್ಫೂರ್ತಿ ತುಂಬಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಲೇಷ್ಯಾ, ಡೆನ್ಮಾರ್ಕ್, ಇಂಡೋನೇಷ್ಯಾವನ್ನು ಸೋಲಿಸುವ ಮೂಲಕ ಭಾರತ ತಂಡವು ಅಪೂರ್ವ ಸಾಧನೆ ಮಾಡಿದ್ದಕ್ಕೆ ಅಭಿನಂದನೆಗಳು. ಅದರಲ್ಲೂ 14 ಬಾರಿ ಚಾಂಪಿಯನ್ ಆಗಿದ್ದ ಇಂಡೋನೇಶ್ಯಾ ತಂಡವನ್ನು ಸೋಲಿಸಿರುವುದು ಐತಿಹಾಸಿಕ ಗೆಲುವಾಗಿದೆ.ಅದಕ್ಕಾಗಿ ಸಚಿವಾಲಯದ ಕ್ರೀಡಾ ಇಲಾಖೆಯಿಂದ ಒಂದು ಕೋಟಿ ರೂ. ಬಹುಮಾನ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್, ಅಸ್ಸಾಂನ ಮುಖ್ಯಮಂತ್ರಿ ಮತ್ತು ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಿಮಂತ ಬಿಸ್ವಾ ಶರ್ಮಾ ಕೂಡಾ ತಂಡವನ್ನು ಅಭಿನಂದಿಸಿದ್ದಾರೆ.