ಮುಂಬೈ, ಮೇ 19 (DaijiworldNews/DB): ಈ ಬಾರಿಯ ಐಪಿಎಲ್ನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಪಯಣವನ್ನು ಅಂತ್ಯಗೊಳಿಸಿದೆ. ಲಖನೌ ಸೂಪರ್ ಜೇಂಟ್ಸ್ ವಿರುದ್ದದ ಬುಧವಾರದ ಪಂದ್ಯದಲ್ಲಿ ಕೆಕೆಆರ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದು, ಪಂದ್ಯದಿಂದ ನಿರ್ಗಮಿಸಿದೆ. ಆದರೆ ಈ ಸೋಲಿನ ನಡುವೆಯೂ ತಂಡದ ಉತ್ತಮ ಕಾರ್ಯಕ್ಷಮತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ ತಂಡವು ಐಪಿಎಲ್ನಿಂದ ನಿರ್ಗಮಿಸಿದ ಕುರಿತು ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಸೋಲಿನಿಂದ ನಮಗೆ ಯಾವುದೇ ರೀತಿಯ ಬೇಸರ ಉಂಟಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ನಾನು ಈವರೆಗೆ ಎಷ್ಟೋ ಪಂದ್ಯಗಳನ್ನು ಆಡಿದ್ದೇನೆ. ಆ ಪೈಕಿ ತುಂಬಾ ಉತ್ತಮವಾದ ಪಂದ್ಯ ಇದು. ಹಾಗಾಗಿ ಇಲ್ಲಿ ಸೋಲುಂಟಾದರೂ ಯಾವುದೇ ಬೇಸರ ಆಗಿಲ್ಲ. ಅತ್ಯುತ್ತಮವಾಗಿ ಆಟವಾಡಿದ್ದಕ್ಕೆ ಸಂತಸವಿದೆ ಎಂದಿದ್ದಾರೆ.
ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಎದುರಾಳಿ ಲಖನೌ ಸೂಪರ್ ಜೇಂಟ್ಸ್ಗೆ ಕೆಕೆಆರ್ ತಂಡ ಕಠಿಣ ಪೈಪೋಟಿ ನೀಡಿತ್ತು. ಗೆಲುವಿನ ಹಾದಿಗೆ 200+ ರನ್ ಟಾರ್ಗೆಟ್ ಇದ್ದರೂ, ಗೆಲುವಿನ ಸನಿಹಕ್ಕೆ ಬಂದು ಮೂರೇ ಮೂರು ರನ್ಗಳಿಂದ ಕೆಕೆಆರ್ ತಂಡ ಸೋಲುಣ್ಣಬೇಕಾಯಿತು. ಹೀಗಾಗಿ ಸೋಲಿಗೆ ತುಂಬಾ ಅಂತರ ಕಾರಣವಾಗಲಿಲ್ಲ. ಮೂರು ರನ್ಗಳ ಅಂತರದಿಂದ ಔಟಾಗಿರುವುದರಿಂದ ಎದುರಾಳಿ ತಂಡದ ಸಮನಾದ ಸ್ಪರ್ಧೆಯನ್ನೇ ಕೆಕೆಆರ್ ತಂಡ ನೀಡಿದೆ. ಇದು ಅಭಿಮಾನಿಗಳು ಮತ್ತು ತಂಡದ ಆಟಗಾರರ ಹರ್ಷಕ್ಕೆ ಕಾರಣವಾಗಿದೆ.
ರಿಂಕ್ ಸಿಂಗ್ ತಂಡವನ್ನು ಕೊಂಡೊಯ್ದ ಹಾದಿ ರೋಚಕವಾಗಿತ್ತು. ಕೊನೆಯ ಎಸೆತದ ಕ್ಷಣ ನಮ್ಮ ಸಮಯವಾಗಿರಲಿಲ್ಲ. ಇದು ಮಾತ್ರ ಅವರಿಗೆ ಬೇಸರ ನೀಡಿದೆ. ಆದಾಗ್ಯೂ ತಂಡದ ಎಲ್ಲಾ ಆಟಗಾರರ ಶ್ರಮ ಒಳ್ಳೆಯದಿತ್ತು ಎಂದಿದ್ದಾರೆ ಶ್ರೇಯಸ್ ಅಯ್ಯರ್.