ನವದೆಹಲಿ, ಮೇ 22 (DaijiworldNews/DB): ಇಡೀ ಭಾರತ ನಿಮ್ಮ ಸಾಧನೆ ಬಗ್ಗೆ ಹೆಮ್ಮೆ ಪಟ್ಟಿದೆ. ಭವಿಷ್ಯದ ಆಟಗಾರರಿಗೂ ಈ ಸಾಧನೆ ಪ್ರೇರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಥಾಮಸ್ ಕಪ್ ಗೆದ್ದ ಭಾರತೀಯ ಆಟಗಾರರ ಸಾಧನೆಯನ್ನು ಕೊಂಡಾಡಿದ್ದಾರೆ.
ಪ್ರಶಸ್ತಿ ಗೆದ್ದ ಆಟಗಾರರನ್ನು ತಮ್ಮ ನಿವಾಸದಲ್ಲಿ ಭಾನುವಾರ ಭೇಟಿಯಾದ ಪ್ರಧಾನಿ ಮೋದಿ, ಥಾಮಸ್ ಕಪ್ ಟೂರ್ನಿಯಲ್ಲಿ ತ್ರಿವಣ ಧ್ವಜ ರಾರಾಜಿಸುವಂತೆ ಮಾಡುವುದು ದಶಕದ ಕನಸು. ಆ ಕನಸನ್ನು ನನಸು ಮಾಡಿದ ತಂಡದ ಶ್ರಮ ಅಭಿನಂದನೀಯ. ಇಡೀ ಭಾರತವೇ ಈ ಶ್ರಮದ ಕುರಿತು ಹೆಮ್ಮೆಪಟ್ಟಿದೆ ಎಂದಿದ್ದಾರೆ.
ಈಗ ಗೆಲುವು ಭಾರತದ ಬ್ಯಾಡ್ಮಿಂಟನ್ ತಂಡದ ಇತಿಹಾಸ. ನಮ್ಮದು ಬಲಿಷ್ಠವಾದ ತಂಡ. ಈ ತಂಡಕ್ಕೆ ನನ್ನ ಅಭಿನಂದನೆ. ಮುಂದೆಯೂ ನಿಮ್ಮ ಸಾಧನೆ ಪ್ರಜ್ವಲಿಸುವಂತಾಗಲಿ ಎಂದು ಮೋದಿ ಶ್ಲಾಘಿಸಿದ್ದಾರೆ.
ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಂಡದ ಕಿದಂಬಿ ಶ್ರೀಕಾಂತ್, ದೇಶದ ಪ್ರಧಾನಿಯನ್ನು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದಿರುವುದು ಬದುಕಿನ ಅದ್ಬುತ ಕ್ಷಣವಾಗಿದೆ. ನಮ್ಮ ಬೆಂಬಲಕ್ಕೆ ಅವರು ನಿಂತಿರುವುದು ನಮಗೆ ಇನ್ನಷ್ಟು ಶಕ್ತಿ ತುಂಬಿದೆ. ಇದು ಹೆಮ್ಮೆಯ ವಿಷಯ ಎಂದರು.
ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಕೋಚ್ ಮಥಿಯಾಸ್ ಬೋ ಮಾತನಾಡಿ, ಈವರೆಗೆ ನಾನು ಹಲವು ಪದಕ ಗೆದ್ದಿದ್ದೇನೆ. ಆದರೆ ಈ ಬಾರಿಯ ಸಾಧನೆಗೆ ಪ್ರಧಾನಿಯವರಿಂದ ಗೌರವ ಸಿಕ್ಕಿರುವುದು ಮರೆಯಲಾಗದ ಕ್ಷಣ ಎಂದರು.
ಬ್ಯಾಂಕಾಕ್ನಲ್ಲಿ ಇತ್ತೀಚೆಗೆ ನಡೆದ 2022ರ ಥಾಮಸ್ ಕಪ್ ಟೂರ್ನಿಯಲ್ಲಿ14 ಬಾರಿ ಚಾಂಪಿಯನ್ ಆಗಿದ್ದ ಇಂಡೋನೇಶ್ಯಾವನ್ನು ಮಣಿಸಿ ಟೀಂ ಇಂಡಿಯಾ ಚೊಚ್ಚಲ ಚಿನ್ನ ಗಳಿಸಿತ್ತು.