ಮುಂಬೈ, ಮೇ 24 (DaijiworldNews/DB): ಬರೋಬ್ಬರಿ ಮೂರು ವರ್ಷಗಳ ಬಳಿಕ ಮತ್ತೆ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಪರ ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಜೂನ್ 9ರಂದು ದಕ್ಷಿಣ ಆಫ್ರಿಕಾ ವಿರುದ್ದ ನಡೆಯುವ ಟಿ20ಯಲ್ಲಿ ದಿನೇಶ್ ಕಾರ್ತಿಕ್ ಆಡಲಿದ್ದಾರೆ. ಈ ಅವಕಾಶದ ಕುರಿತು ದಿನೇಶ್ ಕಾರ್ತಿಕ್ ಫುಲ್ ಖುಷ್ ಆಗಿದ್ದಾರೆ.
ಐಪಿಎಲ್ನಲ್ಲಿ ಆರ್ಸಿಬಿ ಪರ ಫಿನಿಶರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ಅವರು ಮತ್ತೆ ಟೀಂ ಇಂಡಿಯಾ ಪರ ಆಡಲು ಬಿಸಿಸಿಐ ಅವಕಾಶ ಕಲ್ಪಿಸಿರುವುದಕ್ಕೆ ಕಾರಣವಾಗಿದೆ. ಅವರು ಈ ಖುಷಿಯನ್ನು ವ್ಯಕ್ತಪಡಿಸಿರುವ ವೀಡಿಯೋವೊಂದನ್ನು ಆರ್ಸಿಬಿ ಹಂಚಿಕೊಂಡಿದ್ದು, ದಿನೇಶ್ ಈ ವೀಡಿಯೋದಲ್ಲಿ ಸಾಕಷ್ಟು ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮೂರು ವರ್ಷಗಳ ನಂತರ ಆಯ್ಕೆಯಾಗಿರುವುದಕ್ಕೆ ನನಗೆ ಸಂತಸವಾಗಿದೆ. ನನಗಿದು ವಿಶೇಷ ಕಮ್ಬ್ಯಾಕ್. ನಾನು ಕಠಿಣ ಅಭ್ಯಾಸ ನಡೆಸಿದ್ದೇನೆ. ಕೆಲವು ಜನರಿಂದ ತಿರಸ್ಕರಿಸಲ್ಪಟ್ಟಿದ್ದರೂ, ನನ್ನ ಶ್ರಮಕ್ಕೆ ಬಾಗಿಲು ತೆರೆದಿದೆ. ಆರ್ಸಿಬಿ ತಂಡಕ್ಕಾಗಿ ನನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಈ ಅವಕಾಶಕ್ಕೆ ಎಂದೆಂದೂ ಋಣಿಯಾಗಿದ್ದೇನೆ ಎಂದಿದ್ದಾರೆ.
ಮೊದಲು ನಾವು ನಮ್ಮನ್ನು ನಂಬಬೇಕು. ಅದರಿಂದ ಗೆಲುವು ಒಂದಲ್ಲೊಂದು ದಿನ ನಿಶ್ಚಿತ. ನನ್ನ ಮೇಲೆ ನೀವಿಟ್ಟ ನಂಬಿಕೆ ಮತ್ತು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳು. ಕಠಿಣ ಪರಿಶ್ರಮ ಸದಾ ಮುಂದುವರಿಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆ.ಎಲ್. ರಾಹುಲ್ ಅವರನ್ನು ಹಂಗಾಮಿ ನಾಯಕರನ್ನಾಗಿ ಹಾಗೂ ರಿಷಬ್ ಪಂತ್ ಅವರನ್ನು ಉಪನಾಯಕರನ್ನಾಗಿ ಬಿಸಿಸಿಐ ಆಯ್ಕೆಮಾಡಿದೆ.