ಶ್ರೀನಗರ (ಜಮ್ಮು ಮತ್ತು ಕಾಶ್ಮೀರ), ಮೇ 25 (DaijiworldNews/DB): ಕ್ರಿಕೆಟಿಗ ಉಮ್ರಾನ್ ಮಲಿಕ್ ಅವರು ಕ್ರೀಡಾ ನಿತಿಯಲ್ಲಿ ಸೇರಲು ಬಯಸಿದ ವೇಳೆ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಮನೋಜ್ ಸಿನ್ಹಾ ಅವರು ಟೀಂ ಇಂಡಿಯಾಕ್ಕೆ ಆಯ್ಕೆಯಾದ ಭಾರತೀಯ ಕ್ರಿಕೆಟಿಗ ಉಮ್ರಾನ್ ಮಲಿಕ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಉಮ್ರಾನ್ ಮಲಿಕ್ ಇಡೀ ದೇಶ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಇದೊಂದು ಹೆಮ್ಮೆಯ ಕ್ಷಣ. ಯುವಕರಿಗೆ ಉಮ್ರಾನ್ ಕಠಿಣ ಪರಿಶ್ರಮ ಪ್ರೇರಣಾದಾಯಿಯಾಗಿದೆ. ಅವರ ತರಬೇತಿ ಮತ್ತು ಇತರ ಸೌಲಭ್ಯಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವೇ ನೋಡಿಕೊಳ್ಳುತ್ತದೆ. ಎಲ್ಲಾ ಸೌಲಭ್ಯವನ್ನೂ ಅವರಿಗೆ ಕಲ್ಪಿಸಲಾಗುವುದು. ಮುಂದೆ ಸರ್ಕಾರಿ ಉದ್ಯೋಗವನ್ನೂ ನೀಡಲಾಗುವುದು ಎಂದರು.
ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ ಉಮ್ರಾನ್ 13 ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಪಡೆದಿದ್ದರು. ಕಾಶ್ಮೀರದ ಈ ಬೌಲರ್ನ್ನು ಬಳಿಕ ಭಾರತ ತಂಡಕ್ಕೆ ಆಯ್ಕೆ ಮಾಡಲಾಯಿತು. ಜೂನ್ 9 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ T20 ಅಂತಾರಾಷ್ಟ್ರೀಯ ಸರಣಿಯಲ್ಲಿ ಉಮ್ರಾನ್ ಆಡಲಿದ್ದಾರೆ.