ಕೊಲ್ಕತ್ತಾ, ಮೇ 26 (DaijiworldNews/SM): ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಅಮೋಘ ಗೆಲುವು ದಾಖಲಿಸಿಕೊಂಡಿದೆ. ಈ ಗೆಲುವಿನ ರುವಾರಿ ರಜತ್ ಪಾಟೀದಾರ್. ಆರ್ ಸಿಬಿ ಪಾಲಿಗೆ ಸೂಪರ್ ಸ್ಟಾರ್. ಅಂದ ಹಾಗೆ ರಜತ್ ಈ ಸೀಸಸ್ ನಲ್ಲಿ ಯಾರಿಗೂ ಬೇಡವಾಗಿದ್ದ ಪ್ಲೇಯರ್.
2022ರ ಐಪಿಎಲ್ ಮೆಗಾ ಹರಾಜಿನ ಸಂದರ್ಭ ಅನ್ಸೋಲ್ಡ್ ಆಗಿದ್ದ ಪ್ಲೇಯರ್ ರಜತ್ ಪಾಟೀದಾರ್. ಆದರೆ, ಅದೇ ಆಟಗಾರ ಆರ್ ಸಿಬಿ ಪಾಲಿಗೆ ಸಮುದ್ರದಾಳದ ಮುತ್ತು ಎನ್ನುವಂತಾಗಿರುವುದು ಮಾತ್ರವಲ್ಲದೆ, ಆರ್ ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ರಜತ್ ಪಾಟೀದಾರ್ ಅನ್ನು ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವೊಂದು ಫ್ರಾಂಚೈಸಿಯು ಖರೀದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಆರ್ ಸಿಬಿ ತಂಡಕ್ಕೆ ಉಳಿದುಕೊಂಡಿದ್ದರು. ಅದೃಷ್ಟವಶಾತ್ ಆರ್ ಸಿಬಿ ತಂಡವು ಗಾಯಾಳು ಲವನೀತ್ ಸೀಸೋಡಿಯಾ ಬದಲಿಗೆ ಪಾಟೀದಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಆರ್ ಸಿಬಿ ತಂಡದಲ್ಲಿ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ರಜತ್ ಲಕ್ನೋ ವಿರುದ್ಧ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಆರ್ ಸಿಬಿ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಬೆನ್ನೆಲುಬಾಗಿ ಕಾಣಿಸಿಕೊಂಡರು. ಇದು ತಂಡಕ್ಕೆ ಸಿಕ್ಕ ಅದೃಷ್ಟವೆಂಬಂತಾಯಿತು. ಸೀಸನ್ ಉದ್ದಕ್ಕೂ ಉತ್ತಮ ಲಯ ಕಾಯ್ದುಕೊಂಡಿದ್ದ ತಂಡ ಎಲಿಮಿನೇಟ್ ಹಂತದಲ್ಲಿದ್ದಾಗ, ಆರ್ ಸಿಬಿ ಪಾಲಿಗೆ ಪಂಚಾಮೃತವೆಣಿಸಿಕೊಂಡರು.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಿಂಚು ಹರಿಸಿದ ಆರ್ ಸಿಬಿಯ ಹೊಸ ಸೂಪರ್ ಸ್ಟಾರ್ ರಜತ್ ಪಾಟೀದಾರ್ ಅಬ್ಬರಕ್ಕೆ, ಇಡೀ ಕ್ರಿಕೆಟ್ ಲೋಕವೇ ಭೇಷ್ ಎಂದಿದೆ. ಪಾಟೀದಾರ್ ಅಮೋಘ ಶತಕವನ್ನು ಕ್ರಿಕೆಟ್ ಅಭಿಮಾನಿಗಳು ಕೊಂಡಾಡಿದ್ದಾರೆ.