ಅಲಹಾಬಾದ್, ಮೇ 28 (DaijiworldNews/DB): ಐಪಿಎಲ್ 15ನೇ ಆವೃತ್ತಿಯ ಪಂದ್ಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊರ ಬಿದ್ದಿದೆ. ಪ್ರತಿ ಬಾರಿಯೂ ಕಪ್ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳ ಪಾಲಿಗೆ ಈ ಬಾರಿಯೂ ನಿರಾಶೆಯಾಗಿದೆ. ಇದರ ಬೆನ್ನಲ್ಲೇ ಕಳಪೆ ಪ್ರದರ್ಶನ ನೀಡಿ ಆರ್ಸಿಬಿ ಸೋಲಿಗೆ ಕಾರಣರಾದ ಆಟಗಾರರ ವಿರುದ್ದ ಅಭಿಮಾನಿಗಳು ಟ್ವೀಟಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಸ್ಟೇಡಿಯಂನಿಂದ ಹೊರ ನಡೆಯುವಂತೆ ಆಟಗಾರರಿಗೆ ಟ್ವೀಟ್ ಮೂಲಕ ಅಭಿಮಾನಿಗಳು ಹೇಳುತ್ತಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಆರ್ಸಿಬಿ ಸೋಲಿಗೆ ಶರಣಾಗಿ ಐಪಿಎಲ್ನಿಂದ ಹೊರ ಬಿದ್ದಿದೆ. ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಪಡೆದು ಗೆಲುವಿನ ನಗೆ ಬೀರಿದೆ.
ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ವಿಫಲರಾದ ಆರ್ಸಿಬಿ ಬೌಲರ್ಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಎರಡು ಓವರ್ ಬೌಲಿಂಗ್ ಮಾಡಿ 31 ರನ್ ಬಿಟ್ಟುಕೊಟ್ಟ ಮತ್ತು ಶೂನ್ಯ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ವಿರುದ್ದ ಅಭಿಮಾನಿಗಳು ಟ್ವೀಟಾಸ್ತ್ರ ಹೂಡಿದ್ದಾರೆ. ಇವರು ಆರ್ಸಿಬಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಆಡಿದ್ದು ಸಾಕು, ಸ್ಟೇಡಿಯಂನಿಂದ ಹೊರಹೋಗಿ ಎಂಬುದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಮುಂದಿನ ವರ್ಷದಿಂದ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರನ್ನೂ ಆರ್ಸಿಬಿ ತಂಡದಿಂದ ಕೈಬಿಡಬೇಕು ಎಂದು ಇನ್ನೋರ್ವ ಅಭಿಮಾನಿ ಕಿಡಿಕಾರಿದ್ದಾರೆ. ಇನ್ನು ರನ್ ಬಿಟ್ಟುಕೊಟ್ಟು ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿಗೆ ಪರೋಕ್ಷ ಕಾರಣನಾದ ಮೊಹಮ್ಮದ್ ಸಿರಾಜ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕೆಂಬುದಾಗಿ ಟ್ವೀಟ್ ಬಳಕೆದಾರರೊಬ್ಬರು ಸಿರಾಜ್ಗೆ ಲೇವಡಿ ಮಾಡಿದ್ದಾರೆ.