ಅಹಮದಾಬಾದ್, ಮೇ 29 (DaijiworldNews/DB): ಐಪಿಎಲ್ನಲ್ಲಿ ಮತ್ತೊಮ್ಮೆ ಸೋಲು ಕಂಡು ಕ್ರೀಡಾಂಗಣದಿಂದ ಹೊರ ಬಿದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತಮಾಷೆ, ಟೀಕೆಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ. ಆರ್ಸಿಬಿಯ ಫೇಮಸ್ ಡೈಲಾಗ್ ಈ ಸಲ ಕಪ್ ನಮ್ದೇ ಎಂಬುದಕ್ಕೆ ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ. ಕೆಲವರು ಮುಂದಿನ ವರ್ಷ ಕಪ್ ನಮ್ದೇ ಎಂಬ ಮಿಮ್ಸ್ನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ 2022 ರ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲು ಕಂಡಿತು. ಪ್ರತಿ ವರ್ಷವೂ ಕಪ್ ನಮ್ದೇ ಎಂಬ ಪ್ರಸಿದ್ದ ಡೈಲಾಗ್ನೊಂದಿಗೆ ಪ್ರಸಿದ್ದಿಯಾಗುವ ಆರ್ಸಿಬಿ, ಈ ಬಾರಿಯ ಐಪಿಎಲ್ನಲ್ಲಿಯೂ ಅದೇ ಡೈಲಾಗ್ ಮೂಲಕ ಫೇಮಸ್ ಆಗಿತ್ತು. ಆದರೆ, 2008ರಿಂದೀಚೆಗೆ ಕಳೆದ 15 ವರ್ಷಗಳಲ್ಲಿಯೂ ಒಂದೇ ಒಂದು ಬಾರಿ ಕಪ್ ಗೆಲ್ಲಲು ಸಾಧ್ಯವಾಗದ ಆರ್ಸಿಬಿಗೆ ಪ್ರತಿ ವರ್ಷವೂ ಅಭಿಮಾನಿಗಳು ಲೇವಡಿ ಮಾಡುತ್ತಲೇ ಇರುತ್ತಾರೆ. 15ನೇ ಆವೃತ್ತಿಯಲ್ಲಿಯೂ ಕಪ್ ಗೆಲ್ಲದೇ ಇರುವುದಕ್ಕೆ ಕ್ರಿಕೆಟ್ ಅಭಿಮಾನಿಯೊಬ್ಬ ಡೋಂಟ್ವರಿ.. ಮುಂದಿನ ವರ್ಷ ಕಪ್ ನಮ್ದೇ’ ಎಂದು ಮಿಮ್ಸ್ ಮಾಡಿರುವುದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರ ಕಳಪೆ ಪ್ರದರ್ಶನವೂ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
ಕಳೆದ ಹದಿನೈದು ವರ್ಷಗಳಲ್ಲಿ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಒಂದೇ ಒಂದು ಕಪ್ ಗಳಿಸಲಿಲ್ಲ.