ಅಹಮದಾಬಾದ್, ಮೇ 30 (DaijiworldNews/DB): ಬರೋಬ್ಬರಿ ಎರಡು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಸಂಪನ್ನಗೊಂಡಿತು.
ಈ ಐಪಿಎಲ್ ಸಮಾರೋಪದಲ್ಲಿ ಬಿಸಿಸಿಐ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ಅದೆಂದರೆ ಅತಿದೊಡ್ಡ ಕ್ರಿಕೆಟ್ ಟಿ-ಶರ್ಟ್ ಪ್ರದರ್ಶನ.
ಕೊರೊನಾದಿಂದಾಗಿ ಕಳೆದೆರಡು ವರ್ಷಗಳಲ್ಲಿ ಐಪಿಎಲ್ ಅದ್ದೂರಿ ಸಮಾರೋಪ ಆಯೋಜಿಸಲಾಗದ ಕಾರಣ ಈ ಬಾರಿ ಬಿಸಿಸಿಐ ಸಮಾರೋಪವನ್ನು ಅದ್ದೂರಿಯಾಗಿಯೇ ಮಾಡಿತ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಇದಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ಮೈದಾನದಲ್ಲಿ ಅತಿ ದೊಡ್ಡ ಟಿ-ಶರ್ಟ್ ಪ್ರದರ್ಶನ ಮಾಡಿ ಬಿಸಿಸಿಐ ವಿಶ್ವ ದಾಖಲೆಯನ್ನು ಬರೆದಿದೆ. ಈ ಜೆರ್ಸಿಯು 66 ಮೀಟರ್ ಉದ್ದ, 42 ಮೀಟರ್ ಅಗಲವನ್ನು ಹೊಂದಿತ್ತು. ಅಲ್ಲದೆ, ಐಪಿಎಲ್ನಲ್ಲಿ ಆಡಿದ ಹತ್ತು ತಂಡಗಳ ಲೋಗೋವನ್ನು ಇದರಲ್ಲಿ ಮುದ್ರಿಸಲಾಗಿತ್ತು. ಇದನ್ನು ವಿಶ್ವದ ಅತಿ ದೊಡ್ಡ ಜೆರ್ಸಿ ಎಂದು ದಾಖಲಿಸಿರುವ ಗಿನ್ನಿಸ್ ಬುಕ್ಸ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರಿಗೆ ಪ್ರಮಾಣಪತ್ರ ನೀಡಿದ್ದಾರೆ.
ವಿನ್ನರ್ ಮತ್ತು ರನ್ನರ್ ಅಪ್ ತಂಡಗಳ ನಾಯಕರಾದ ಹಾರ್ದಿಕ್ ಪಾಂಡ್ಯ ಹಾಗೂ ಸಂಜು ಸ್ಯಾಮ್ಸನ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ನಟ ರಣವೀರ್ ಸಿಂಗ್ ನೃತ್ಯ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಕೆ.ಆರ್. ರೆಹಮಾನ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.