ನವದೆಹಲಿ, ಜೂ 01 (DaijiworldNews/SM): ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ನಿರಂತರ ಅಭಿಮಾನಿಗಳ ಟೀಕೆಗಳಿಗೆ ಗುರಿಯಾಗಿದ್ದಾರೆ. ವಿರಾಟ್ ಕೊಹ್ಲಿಯ ಫಾರ್ಮ್ ಶಾಶ್ವತವಾಗಿ ಮರೆಯಾಗಲಿದೆ ಎನ್ನುವ ಮಟ್ಟಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ನಡುವ್ಎ ಪಾಕ್ ಕ್ರಿಕೆಟ್ ದಿಗ್ಗಜರೊಬ್ಬರು ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ.
ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಪ್ರಶ್ನಿಸುವವರು ಸ್ವಲ್ಪ ಆಲೋಚಿಸಿ ಮಾತನಾಡಬೇಕು. ಈ ಆಟಗಾರನಿಗೆ ಸಲ್ಲಬೇಕಾದ ಗೌರವ ಸಿಗಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಖಂಡಿತವಾಗಿಯೂ 100 ಶತಕಗಳ ಗಡಿ ಮುಟ್ಟುತ್ತಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಜನರು ಯೋಚಿಸಿ ಮಾತನಾಡಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಅವರು, ‘ಏನಾದರೂ ಹೇಳುವ ಮೊದಲು, ಸಣ್ಣ ಮಕ್ಕಳು ಅವರನ್ನು ನೋಡುತ್ತಾರೆ ಎಂದು ಜನರು ಭಾವಿಸಬೇಕು. ಒಬ್ಬ ಪಾಕಿಸ್ತಾನಿಯಾಗಿ ನಾನು ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಹೇಳುತ್ತಿದ್ದೇನೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಗಳಿಸಬೇಕೆಂದು ನಾನು ಬಯಸುತ್ತೇನೆ. ಜೊತೆಗೆ ಕೊಹ್ಲಿ 45 ವರ್ಷ ವಯಸ್ಸಿನವರೆಗೂ ಕ್ರಿಕೆಟ್ ಆಡಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.