ಆಗ್ರಾ, ಜೂ 02 (DaijiworldNews/MS): ಭಾರತದ ಕ್ರಿಕೆಟ್ ತಂಡದ ವೇಗಿ ದೀಪಕ್ ಚಾಹರ್ ಅವರು ತಮ್ಮ ಬಹುಕಾಲದ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
"ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ...ನಾನು ನಿನ್ನನ್ನು ಮೊದಲು ಭೇಟಿಯಾದಾಗ ನೀನೇ ನನಗೆ ಸರಿ ಎಂದು ಭಾವಿಸಿದೆ.ನಾವು ನಮ್ಮ ಜೀವನದ ಪ್ರತಿ ಕ್ಷಣವನ್ನು ಒಟ್ಟಿಗೆ ಆನಂದಿಸಿದ್ದೇವೆ ಮತ್ತು ಇದೇ ರೀತಿ ನಿಮ್ಮನ್ನು ಸಂತೋಷವಾಗಿಡುವ ಭರವಸೆಯನ್ನು ನಾನು ನೀಡುತ್ತೇನೆ" ಎಂದು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಚಾಹರ್ ಹಂಚಿಕೊಂಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದು, ಈ ಅದ್ದೂರಿ ವಿವಾಹಕ್ಕೆ ಕ್ರಿಕೆಟ್ ತಾರೆಗಳು, ಸ್ಥಳೀಯ ರಾಜಕಾರಣಿಗಳು, ಸಿನಿಮಾರಂಗದ ಗಣ್ಯರು, ಕುಟುಂಬದವರು ಮತ್ತು ಆಪ್ತರು ಭಾಗವಹಿಸಿದ್ದರು. ದೀಪಕ್ ಬಿಳಿ ಶೆರ್ವಾನಿ ಮತ್ತು ಪೇಟವನ್ನು ಧರಿಸಿದ್ದರೆ, ಜಯಾ ಕ್ರೀಮ್ ಬಣ್ಣದ ಲೆಹೆಂಗಾ ತೊಟ್ಟು ಹಸೆಮಣೆ ಏರಿದ್ದರು. ಎರಡು ಕುಟುಂಬಗಳ ಸಂಪ್ರದಾಯದಂತೆ ಮದುವೆ ನಡೆಯಿತು. ಕಳೆದ ವರ್ಷ ಐಪಿಎಲ್ ಪಂದ್ಯದ ವೇಳೆ, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಾಹರ್ ಗೆಳತಿ ಜಯಾ ಭಾರದ್ವಾಜ್ ಅವರಿಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೆದುರೇ ಪ್ರೇಮ ನಿವೇದನೆ ಮಾಡಿದ್ದರು. ಜಯಾ ಅವರು ನಟ ಮತ್ತು ಬಿಗ್ಬಾಸ್ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೆಹಲಿಯವರಾದ ಜಯಾ, ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.