ಮುಂಬೈ, ಜೂ. 04 (DaijiworldNews/DB): ಈ ಐಪಿಎಲ್ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಹಲವು ಹೊಸ ಆಟಗಾರರಿಗೆ ಆಡಲು ಅವಕಾಶ ಕಲ್ಪಿಸಿದೆ. ಆದರೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು 30 ಲಕ್ಷ ರೂ.ಗಳಿಗೆ ಖರೀದಿಸಿದ್ದರೂ, 14 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಆಡಲು ಅವಕಾಶ ನೀಡಲಿಲ್ಲ. ಅರ್ಜುನ್ಗೆ ಅವಕಾಶ ನೀಡದಿರುವ ಕುರಿತು ತಂಡದ ಕೋಚ್ ಶೇನ್ ಬಾಂಡ್ ಪ್ರತಿಕ್ರಿಯಿಸಿದ್ದಾರೆ.
ಶೇನ್ ಬಾಂಡ್ ಪ್ರಕಾರ ಅರ್ಜುನ್ಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕುಶಲತೆ ಇನ್ನೂ ಸುಧಾರಿಸಬೇಕಿದೆ. ಅವರಿಗೆ ಇನ್ನೂ ಅನುಭವ ಅಗತ್ಯವಾಗಿದೆ. ಆಟದಲ್ಲಿ ಇನ್ನಷ್ಟು ಪಳಗಿದ ನಂತರ ಅವರು ಅವಕಾಶ ಪಡೆಯಲಿದ್ದಾರೆ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಅರ್ಜುನ್ ಆಡಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳೆದಿದ್ದಿತ್ತು. ಏಳೆಂಟು ಪಂದ್ಯಗಳು ಮುಗಿದ ಬಳಿಕ ಮುಂದೆ ಅರ್ಜುನ್ ಆಡಲಿದ್ದಾರೆ ಎಂದೇ ಕ್ರಿಕೆಟ್ ಪ್ರೇಮಿಗಳು ಭಾವಿಸಿದ್ದರು. ಆದರೆ ತಂಡದ ಮ್ಯಾನೇಜ್ಮೆಂಟ್ ಅರ್ಜುನ್ ಗೆ ಅವಕಾಶ ನೀಡದೆ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದರು.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವುದು ದೊಡ್ಡ ವಿಷಯ. ಹೀಗಾಗಿ ಅರ್ಜುನ್ ಇನ್ನಷ್ಟು ಶ್ರಮ ಹಾಕಬೇಕಾಗಿದೆ. ತಂಡದ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಅವರು ಕಾಯಲೇಬೇಕಾಗುತ್ತದೆ ಎಂಬುದು ಬಾಂಡ್ ಅಭಿಪ್ರಾಯ.