ನವದೆಹಲಿ, ಜೂ. 07 (DaijiworldNews/DB): ತರಬೇತಿಗೆ ವಿದೇಶಕ್ಕೆ ತೆರಳಿದ್ದ ವೇಳೆ ಕೋಚ್ ಒಬ್ಬರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಸೈಕ್ಲಿಸ್ಟ್ ಯುವತಿಯೊಬ್ಬರು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾಗೆ ದೂರು ನೀಡಿದ್ದಾರೆ.
ರಾಷ್ಟ್ರೀಯ ತಂಡದ ಕೋಚ್ ಆರ್.ಕೆ.ಶರ್ಮ ಅವರ ವಿರುದ್ದ ಸೈಕ್ಲಿಸ್ಟ್ ಮಯೂರಿ ಲೂಟೆ ದೂರು ನೀಡಿದ್ದಾರೆ. ಸ್ಲೊವೇನಿಯದಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾಗ ಶರ್ಮ ಅವರು ತಮ್ಮೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ. ಅಸಭ್ಯವಾಗಿ ನನ್ನೊಂದಿಗೆ ನಡೆದುಕೊಂಡಿದ್ದಾರೆ ಎಂದು ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದಲ್ಲಿ ಇದೀಗ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಸಿಎಫ್ಐ ತನಿಖೆಗಾಗಿ ಸೋಮವಾರ ಸಮಿತಿಯೊಂದನ್ನು ನೇಮಿಸಿದೆ.
ಸಿಎಫ್ಐ ಶಿಫಾರಸಿನಂತೆ ಆರ್.ಕೆ. ಶರ್ಮ ಅವರನ್ನು ಕೋಚ್ ಆಗಿ ನೇಮಿಸಲಾಗಿತ್ತು ಎಂದು ಸಾಯ್ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.