ನವದೆಹಲಿ, ಜೂ 08 (DaijiworldNews/DB): ಫ್ರಾನ್ಸ್ನ ಚಟೌರೊಕ್ಸ್ನಲ್ಲಿ ಜೂ 8ರ ಬುಧವಾರ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಟೋಕಿಯೊ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೆಖರಾ ಹಾಗೂ ಶೂಟರ್ ಶ್ರೀಹರ್ಷ ದೇವರಡ್ಡಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. ಇದೊಂದು ಐತಿಹಾಸಿಕ ಸಾಧನೆಯಾಗಿದೆ ಎಂಬುದಾಗಿ ಇದೇ ವೇಳೆ ಮೋದಿ ಬಣ್ಣಿಸಿದ್ದಾರೆ.
250.6 ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 ನಲ್ಲಿ ಲೆಖರಾ ಚೆನ್ನ ಗೆದ್ದಿರುವುದಲ್ಲದೆ, ತನ್ನದೇ 249.6 ರ ವಿಶ್ವ ದಾಖಲೆಯನ್ನು ಮುರಿದು ಮುಂದಿನ ವರ್ಷದ ಪ್ಯಾರಿಸ್ ಪ್ಯಾರಾ ಒಲಿಂಪಿಕ್ಸ್ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಲೆಖರಾ ಅವರು ಐತಿಹಾಸಿಕ ದಾಖಲೆಯನ್ನು ಮಾಡಿದ್ದಾರೆ. ಯಶಸ್ಸಿನ ಎತ್ತರಕ್ಕೆ ಸದಾ ಏರುತ್ತಿರಿ ಮತ್ತು ಇತರರಿಗೆ ಸದಾ ಸ್ಪೂರ್ತಿಯಾಗಿರಿ ಎಂದು ಟ್ವೀಟ್ ಮಾಡಿ ಮೋದಿ ಶುಭ ಹಾರೈಸಿದ್ದಾರೆ.
ಶೂಟರ್ ಶ್ರೀಹರ್ಷ ದೇವರಡ್ಡಿ ಅವರ ಸಾಧನೆ ಕುರಿತು ಟ್ವೀಟರ್ನಲ್ಲಿ ಅಭಿನಂದಿಸಿದ ಪ್ರಧಾನಿ ಮೋದಿ, ಶ್ರೀಹರ್ಷ ದೇವರಡ್ಡಿ ಚಿನ್ನ ಗೆದ್ದಿರುವುದು ಹೆಮ್ಮೆಯ ವಿಷಯ. ಅವರ ದೃಢಸಂಕಲ್ಪ ಇತರರಿಗೆ ಪ್ರೇರಣಾದಾಯಿಯಾಗಿದೆ. ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ಅವರಿಗೆ ಸರ್ವರ ಹಾರೈಕೆ ಇರಲಿ ಎಂದಿದ್ದಾರೆ.