ಮುಂಬೈ, ಜೂ 09 (DaijiworldNews/MS): ಭಾರತ ಮಹಿಳಾ ಕ್ರಿಕೆಟ್ ತಂಡ ಅನುಭವಿ ಬ್ಯಾಟರ್ ಹಾಗೂ ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ದಿಡೀರ್ ನಿವೃತ್ತಿ ಘೋಷಿಸಿದ್ದಾರೆ.
ಭಾರತದಲ್ಲಿ ಸಾವಿರಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿರುವ ಮಿಥಾಲಿ ರಾಜ್ ದಶಕದಿಂದ ಭಾರತ ಕ್ರಿಕೆಟ್ಗೆ ಮತ್ತು ಕ್ರಿಕೆಟ್ ಲೋಕಕ್ಕೆ ಅತೀವ ಕೊಡುಗೆಯನ್ನು ನೀಡಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಭಾರತ ಮಹಿಳಾ ಕ್ರಿಕೆಟ್ ತಂಡದ ಪರ ತಮ್ಮದೇ ಛಾಪು ಮೂಡಿಸಿದ್ದ 39 ವರ್ಷದ ಮಿಥಾಲಿ ರಾಜ್, ಬುಧವಾರವಾದ ಇಂದು ದಿಢೀರ್ ಎನ್ನುವಂತೆ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಸಿಕ್ಕ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಈಗ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನ ಜೀವನದ ಎರಡನೇ ಇನಿಂಗ್ಸ್ ಶುರುಮಾಡಲು ಎದುರು ನೋಡುತ್ತಿದ್ದೇನೆ. ಎಲ್ಲ ಪಯಣಗಳಂತೆ ಈ ಪಯಣವೂ ಒಂದು ಅಂತ್ಯ ಕಾಣಬೇಕಿತ್ತು. ಆ ಸಮಯ ಇಂದು ಬಂದಿದೆ ಕಳೆದ ಹಲವು ವರ್ಷಗಳಿಂದ ನನಗೆ ಪ್ರೀತಿ ಹಾಗೂ ಬೆಂಬಲ ನೀಡಿದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು ಎಂದು ಮಿಥಾಲಿ ಟ್ವೀಟ್ ಮಾಡಿದ್ದಾರೆ.
ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಮಾದರಿಯಲ್ಲಿ ಅತ್ಯಧಿಕ ರನ್ ಗಳಿಸಿದ ಮಹಿಳಾ ಬ್ಯಾಟರ್ ಎಂಬ ವಿಶ್ವ ದಾಖಲೆ ಹೊಂದಿದ್ದಾರೆ.