ಕೋಲ್ಕತ್ತಾ, ಜೂ 13 (DaijiworldNews/DB): 2023 ಏಷ್ಯನ್ ಕಪ್ ಕ್ವಾಲಿಫೈಯರ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಫುಟ್ಬಾಲ್ ಪಂದ್ಯಾಟ ನಡೆದ ಬಳಿಕ ಉಭಯ ತಂಡದ ಆಟಗಾರರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಹೊಡೆದಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಕೋಲ್ಕತ್ತಾದಲ್ಲಿ ಭಾರತ ಮತ್ತು ಅಪ್ಘಾನ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ತೀರಾ ಪೈಪೋಟಿ ಇದ್ದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಭಾರತ ಜಯಗಳಿಸಿತು. ಇದರಿಂದ ಹತಾಶೆಗೊಳಗಾದ ಅಪ್ಘಾನ್ ಆಟಗಾರರು ಭಾರತ ತಂಡದೊಂದಿಗೆ ಮಾತಿನ ಚಕಮಕಿ ನಡೆಸಿದರು. ಮೊದಲು ಎರಡ್ಮೂರು ಮಂದಿಯ ನಡುವೆ ನಡೆದ ಮಾತು, ಬಳಿಕ ಮಾತಿಗೆ ಮಾತು ಬೆಳೆದು ಎರಡೂ ತಂಡಗಳ ಹಲವು ಆಟಗಾರರು ಹೊಡೆದಾಟಕ್ಕೆ ಮುಂದಾದರು. ಬೆಂಚ್ ಮೇಲಿದ್ದ ಆಟಗಾರರೂ ಈ ವೇಳೆ ಮೈದಾನಕ್ಕಾಗಮಿಸಿದರು.
ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದ್ದು, 84 ನಿಮಿಷಗಳ ಕಾಲ ಪಂದ್ಯ ಮುಂದುವರಿಯಿತು. ಕೊನೆ ಕ್ಷಣದಲ್ಲೇ ಭಾರತದ ಸುನಿಲ್ ಛೆಟ್ರಿ ಫ್ರೀ ಕಿಕ್ನಲ್ಲಿ ಗೋಲು ಗಳಿಸಿ ಭಾರತಕ್ಕೆ ಜಯ ತಂದು ಕೊಟ್ಟಿದ್ದರು. ಕೊನೆ ಗಳಿಗೆಯ ಸೋಲು ಅಪ್ಘಾನ್ ತಂಡವನ್ನು ಹತಾಶೆಗೆ ದೂಡಿತ್ತು.