ನವದೆಹಲಿ, ಜೂ 14 (DaijiworldNews/DB): ನಾನು ಒಂದು ಸಮುದಾಯವನ್ನು ಪ್ರತಿನಿಧಿಸುತ್ತಿಲ್ಲ, ನನ್ನ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ..ಇದು ವಿಶ್ಬವ ಚಾಂಪಿಯನ್ ಬಾಕ್ಸರ್ ನಿಖಾತ್ ಝರೀನ್ ಅವ ಮಾತು.
ಟರ್ಕಿಯ ಇಸ್ತಾಂಬುಲ್ನಲ್ಲಿ ಇತ್ತೀಚೆಗೆ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಈ ವೇಳೆ ಅವರ ಕಠಿಣ ಪರಿಶ್ರಮ, ಸಾಧನೆಗಳ ಬದಲಾಗಿ ಆಕೆಯ ಧರ್ಮದ ಬಗ್ಗೆಯೇ ಜನ ಹೆಚ್ಚಾಗಿ ಮಾತನಾಡುತ್ತಿರುವ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು.
ನನಗೆ ಹಿಂದು, ಮುಸ್ಲಿಂ ಅನ್ನೋದು ವಿಷಯವಲ್ಲ. ಒಬ್ಬ ಅತ್ಲೀಟ್ ಆಗಿ ನಾನು ನನ್ನ ಭಾರತವನ್ನು ಪ್ರತಿನಿಧಿಸುತ್ತೇನೆಯೇ ಹೊರತು ಯಾವುದೇ ಸಮುದಾಯವನ್ನು ನಾನು ಪ್ರತಿನಿಧಿಸುತ್ತಿಲ್ಲ. ಭಾರತಕ್ಕಾಗಿ ಪದಕ ಗಳಿಸಿರುವುದಕ್ಕೆ ಖುಷಿಯಾಗಿದೆ ಎಂದರು.
ಸಂಪ್ರದಾಯಬದ್ದ ಸಮಾಜದಿಂದ ಬಂದು ಸಾಮಾಜಿಕ ಕಟ್ಟುಪಾಡುಗಳನ್ನು ದಾಟಿ ಬಾಕ್ಸಿಂಗ್ನಲ್ಲಿ ಪರಿಣತಿ ಸಾಧಿಸಿರುವುದು ಹೇಗೆಂಬ ಪ್ರಶ್ನೆಗೆ, ನಾನು ಇದಕ್ಕಾಗಿ ಯಾವುದೇ ನಿರ್ದಿಷ್ಟ ಸಮುದಾಯದೊಂದಿಗೆ ಹೋರಾಡಿಲ್ಲ. ಬಾಕ್ಸಿಂಗ್ನಲ್ಲಿ ನನ್ನ ದೇಶ ಪ್ರಕಾಶಿಸಲು ಹೋರಾಡಿದ್ದೇನೆ, ದೇಶಕ್ಕಾಗಿ ಜಯ ಗಳಿಸಲು ಹೋರಾಡಿದ್ದೇನೆ ಎಂದು 25 ವರ್ಷದ ನಿಖಾತ್ ಪ್ರತಿಕ್ರಿಯಿಸಿದರು.
ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಬ್ಬ ಅತ್ಲಿಟ್ಗೆ ಬಹುಮುಖ್ಯ. ಇದಕ್ಕೆಂದೇ ವಿಶೇಷ ತರಬೇತಿಗಳನ್ನೂ ಪಡೆದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದವರು ಇದೇ ವೇಳೆ ಕ್ರೀಡಾ ಭವಿಷ್ಯತ್ತಿನ ಬಗ್ಗೆಯೂ ಮಾತನಾಡಿದರು.
ಭಾರತೀಯ ಬಾಕ್ಸರ್ಗಳು ಇತರರಿಗಿಂತ ಕಡಿಮೆ ಇಲ್ಲ, ಎಲ್ಲರೂ ತುಂಬಾ ಪ್ರತಿಭೆ, ಶಕ್ತಿ, ವೇಗ ಮತ್ತು ಬಲಾಢ್ಯತೆ ಹೊಂದಿರುವವರು. ವಿಶ್ವ ಮಟ್ಟಕ್ಕೆ ಏರಿದ ಕೂಡಲೇ ಮಾನಸಿಕ ಒತ್ತಡ ನಿಯಂತ್ರಣ ತರಬೇತಿ ಪಡೆದುಕೊಂಡರೆ ಸಾಧನೆ ನಿರಂತರವಾಗಿರಲು ಸಾಧ್ಯ ಎಂಬುದು ಅವರ ಸಲಹೆ.