ಬೆಂಗಳೂರು, ಜೂ 16 (DaijiworldNews/SM): ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಇದೇ ಭಾನುವಾರದಂದು ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T-20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾದ ರಕ್ಷಣೆ ಮತ್ತು ಭದ್ರತಾ ವ್ಯವಸ್ಥೆಯ ಮುಂಜಾಗರೂಕತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಾದ ರೋಜರ್ ಬಿನ್ನಿ, ಸಂತೋಷ್ ಮೆನನ್, ವಿನಯ್ ಮೃತ್ಯುಂಜಯ, ಅಭಿರಾಮ್, ಕಾರ್ತಿಕ್, ಡಿಎಸ್ ಅರುಣ್ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ KSCA ಅಧ್ಯಕ್ಷ ರೋಜರ್ ಬಿನ್ನಿಯವರು, ಸಚಿವರಿಗೆ ಮನವಿಯನ್ನು ಸಲ್ಲಿಸಿ, ಐದು ದಿನಗಳ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಪೊಲೀಸ್ ಇಲಾಖೆ, ವಿಧಿಸುವ ಭದ್ರತಾ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಿದ್ದು, ಅದನ್ನು ಪರಿಷ್ಕರಿಸಬೇಕೆಂದು ಕೋರಿಕೆ ಸಲ್ಲಿಸಿದರು.