ನೆದರ್ಲೆಂಡ್ಸ್, ಜೂ 17 (DaijiworldNews/SM): ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 498 ರನ್ ಗಳಿಸುವ ಮೂಲಕ ವಿಶ್ವದಾಖಲೆಗೆ ಪಾತ್ರವಾಗಿದೆ. ಜಾಸ್ ಬಟ್ಲರ್, ಪೀಟರ್ ಸಾಲ್ಟ್ ಮತ್ತು ಡೇವಿಡ್ ಮಲನ್ ಅವರ ಭರ್ಜರಿ ಶತಕಗಳ ನೆರವಿನಿಂದ ಇಂಗ್ಲೆಂಡ್ ವಿಶ್ವ ದಾಖಲೆ ಬರೆದಿದೆ.
ಶುಕ್ರವಾರದಂದು ಮೊದಲ ಏಕದಿನ ಪಂದ್ಯ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 4 ವಿಕೆಟ್ ಗಳನ್ನು ಕಳೆದುಕೊಂಡು 498 ರನ್ಗಳಿಸಿತು. ನೆದರ್ಲೆಂಡ್ಸ್ ತಂಡದ ಬೌಲರ್ಗಳನ್ನು ಆಂಗ್ಲರು ಮನಬಂದತೆ ಚಚ್ಚಿದರು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಜೇಸನ್ ರಾಯ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಬ್ಬ ಆರಂಭಿಕ ಪೀಟರ್ ಸಾಲ್ಟ್ 93 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 122 ರನ್, ಡೇವಿಡ್ ಮಲನ್ 109 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 125 ರನ್, ಜಾಸ್ ಬಟ್ಲರ್ ಕೇವಲ 70 ಎಸೆತಗಳಲ್ಲಿ 7 ಬೌಂಡರಿ ಮತ್ತು 14 ಸಿಕ್ಸರ್ಗಳ ಸಹಿತ ಅಜೇಯ 162 ರನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ 22 ಎಸೆತಗಳಲ್ಲಿ ಅಜೇಯ 66 ರನ್ಗಳಿಸಿ ವಿಶ್ವದಾಖಲೆ ಮೊತ್ತಕ್ಕೆ ನೆರವಾದರು.
2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಮೋಘ ಪ್ರದರ್ಶನ ತೋರಿದ್ದ ಜಾಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ಫೈನಲ್ ತಲುಪಲು ನಿರ್ಣಾಯಕ ಪಾತ್ರವಹಿಸಿದ್ದರು. ಅವರು 17 ಪಂದ್ಯಗಳಲ್ಲಿ 4 ಶತಕ ಮತ್ತು 4 ಅರ್ಧಶತಕಗಳ ನೆರವಿನಿಂದ 863 ರನ್ಗಳಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಒಂದೇ ಸೀಸನ್ನಲ್ಲಿ ದಾಖಲಿಸಿದ 2ನೇ ಗರಿಷ್ಠ ಮೊತ್ತವಾಗಿತ್ತು. ವಿರಾಟ್ ಕೊಹ್ಲಿ 2016ರಲ್ಲಿ 973 ರನ್ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಈ ಪಂದ್ಯದಲ್ಲಿ ಟಿ20 ಶೈಲಿಯಲ್ಲೆ ಬ್ಯಾಟಿಂಗ್ ಮಾಡಿದ ಬಟ್ಲರ್ 231 ರ ಸ್ಟ್ರೈಕ್ರೇಟ್ನಲ್ಲಿ 162 ರನ್ಗಳಿಸಿದರು.