ಲೀಸೆಸ್ಟರ್ (ಇಂಗ್ಲೆಂಡ್), ಜೂ 26 (DaijiworldNews/DB): ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್-19 ದೃಢಪಟ್ಟಿದ್ದು, ಜುಲೈ 1ರಂದು ಬರ್ಮಿಂಗ್ಹ್ಯಾಂನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವುದು ಅನುಮಾನುವಾಗಿದೆ.
ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯ ಜುಲೈ 1ರಂದು ಮರು ನಿಗದಿಯಾಗಿದೆ. ಇದಕ್ಕಾಗಿ ಗ್ರೇಸ್ ಡೋಡ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಅಭ್ಯಾಸ ಪಂದ್ಯದಲ್ಲಿ ಸೆಣಸಾಡುತ್ತಿದ್ದಾರೆ. ಆದರೆ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 25 ರನ್ ಗಳಿಸಿದ್ದ ರೋಹಿತ್, ಎರಡನೇ ಇನ್ನಿಂಗ್ಸ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ರೋಹಿತ್ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆಂದು ಇದೇ ವೇಳೆ ಬಿಸಿಸಿಐ ಮಾಹಿತಿ ನೀಡಿತ್ತು. ಇದೀಗ ಅವರಿಗೆ ಕೋವಿಡ್ ದೃಢಪಟ್ಟಿರುವುದರಿಂದ ಅವರು ಹೊಟೇಲ್ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮಂಡಳಿಯ ವೈದ್ಯಕೀಯ ತಂಡ ಅವರ ನಿಗಾದಲ್ಲಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿ ತಿಳಿಸಿದೆ.
ಪಂದ್ಯಕ್ಕೆ ಇನ್ನು ಐದೇ ದಿನ ಬಾಕಿ ಉಳಿದಿದ್ದು, ಅಷ್ಟರಲ್ಲಾಗಲೇ ರೋಹಿತ್ ಚೇತರಿಸಿಕೊಳ್ಳದಿದ್ದರೆ ವೇಗಿ ಜಸ್ಪ್ರೀತ್ ಬೂಮ್ರಾ ಅಥವಾ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಈ ಸರಣಿಯ ನಾಲ್ಕು ಪಂದ್ಯಗಳು ಕೋವಿಡ್ ಪೂರ್ವದಲ್ಲೇ ಮುಕ್ತಾಯಗೊಂಡಿದ್ದು, ಇದರಲ್ಲಿ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ ಅಥವಾ ಡ್ರಾ ಮಾಡಿಕೊಂಡರೆ 2007ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಸಂಭ್ರಮವನ್ನು ಮುಡಿಗೇರಿಸಿಕೊಳ್ಳಲಿದೆ.