ಬೆಂಗಳೂರು, ಜೂ 26 (DaijiworldNews/SM): ರಣಜಿಯಲ್ಲಿ ಮಧ್ಯಪ್ರದೇಶ ತಂಡ ದಾಖಲೆ ನಿರ್ಮಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ರಣಜಿ ಟ್ರೋಫಿ 2022 ಫೈನಲ್ ಪಂದ್ಯದಲ್ಲಿ 41 ಬಾರಿ ಚಾಂಪಿಯನ್ ಮುಂಬೈ ವಿರುದ್ಧ 6 ವಿಕೆಟ್ ಗಳ ಜಯಗಳಿಸುವ ಮೂಲಕ ಮಧ್ಯ ಪ್ರದೇಶ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದು, ಇತಿಹಾಸ ನಿರ್ಮಿಸಿದೆ.
ಮಧ್ಯಪ್ರದೇಶ ಕ್ರಿಕೆಟ್ ತಂಡವು ಭಾನುವಾರವಾದ ಇಂದು ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದು, 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ಎದುರು ಆದಿತ್ಯ ಶ್ರೀವಾಸ್ತವ್ ನೇತೃತ್ವದ ಮಧ್ಯಪ್ರದೇಶ ತಂಡವು 6 ವಿಕೆಟ್ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2022ನೇ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಬಗ್ಗುಬಡಿಯುವ ಮೂಲಕ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಜಯಿಸಿದೆ.
ಆ ಮೂಲಕ ಮಧ್ಯಪ್ರದೇಶ ಕ್ರಿಕೆಟ್ ತಂಡವು ಬರೋಬ್ಬರಿ 23 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. 1998-99ರಲ್ಲಿ ಇದೇ ಮೈದಾನದಲ್ಲಿ ಕರ್ನಾಟಕದೆದುರು ಮಧ್ಯಪ್ರದೇಶ ತಂಡವು 96 ರನ್ಗಳ ಅಂತರದ ಸೋಲು ಕಾಣುವ ಮೂಲಕ ಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಆಗ ಮಧ್ಯಪ್ರದೇಶ ತಂಡದ ನಾಯಕರಾಗಿದ್ದ ಚಂದ್ರಕಾಂತ್ ಪಂಡಿತ್, ಇದೀಗ ಮಧ್ಯಪ್ರದೇಶ ತಂಡದ ಕೋಚ್ ಆಗಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಆಟಗಾರರು ತಮ್ಮ ಕೋಚ್ ಚಂದ್ರಕಾಂತ್ ಪಂಡಿತ್ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.
ಗೆಲ್ಲಲು 108 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಮಧ್ಯಪ್ರದೇಶ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಹಿಮಾಂಶು ಮಂತ್ರಿ 37 ರನ್ ಬಾರಿಸುವ ಮೂಲಕ ಎರಡನೇ ಇನಿಂಗ್ಸ್ನಲ್ಲಿ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನು ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸುವ ಮೂಲಕ ಇನಿಂಗ್ಸ್ ಮುನ್ನಡೆಗಳಿಸಲು ನೆರವಾಗಿದ್ದ ತಾರಾ ಬ್ಯಾಟರ್ ರಜತ್ ಪಾಟೀದಾರ್ ಅಜೇಯ 30 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.