ಪಂಜಾಬ್ ಜೂ 28 (DaijiworldNews/MS): ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ , 1970 ರ ದಶಕದಲ್ಲಿ ಭಾರತದ ಕೆಲವು ಸ್ಮರಣೀಯ ವಿಜಯಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ಹಾಕಿ ಆಟಗಾರ ವರೀಂದರ್ ಸಿಂಗ್ (75) ಮಂಗಳವಾರ ಬೆಳಿಗ್ಗೆ ಜಲಂಧರ್ ನಲ್ಲಿ ನಿಧನರಾದರು.
1975 ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್ನಲ್ಲಿ ಚಿನ್ನದ ಪದಕ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು. ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಅಂತರದಿಂದ ಗೆದ್ದು ಚಿನ್ನದ ಪದಕ ಗೆದ್ದ ಏಕೈಕ ಪಂದ್ಯ ಇದಾಗಿದೆ. 1972 ರಲ್ಲಿ ಮುನೀಚ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿ ಹಾಗೂ 1973 ರಲ್ಲಿ ಆಮ್ಸ್ಟ್ರಾಡಾಮ್ ನಲ್ಲಿ ನಡೆದ ವಿಶ್ವಕಪ್ ನ ಬೆಳ್ಳಿ ಪದಕ ಗೆದ್ದ ತಂಡ, 1974, 1978 ರ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ತಂಡಗಳಲ್ಲಿಯೂ ವರಿಂದರ್ ಸಿಂಗ್ ಇದ್ದರು.
2007 ರಲ್ಲಿ, ಭಾರತದ ಹಾಕಿಯ ದೈತ್ಯ ಪ್ರತಿಭೆ ವರಿಂದರ್ ಸಿಂಗ್ ಗೆ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವರಿಂದರ್ ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಕಂಬನಿ ಮಿಡಿದಿದೆ.