ಲಂಡನ್, ಜೂ 29 (DaijiworldNews/DB): ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಇಂಗ್ಲೆಂಡ್ನಲ್ಲಿರುವ ಟೀಂ ಇಂಡಿಯಾ ಆಟಗಾರರು ಅಭಿಮಾನಿಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳುವಂತಿಲ್ಲ ಎಂಬ ಬಿಸಿಸಿಐ ಸೂಚನೆಗೆ ಕೊಹ್ಲಿ, ರಿಷಬ್ ಕ್ಯಾರೇ ಎಂದಿಲ್ಲ. ಸೂಚನೆಯನ್ನೂ ಮೀರಿ ಸೆಲ್ಪೀ ತೆಗೆದುಕೊಂಡ ಈ ಇಬ್ಬರ ಮೇಲೆ ಬಿಸಿಸಿಐ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಇದೀಗ ನೆಟ್ಟಿಗರು ಆಗ್ರಹಿಸಿದ್ದಾರೆ.
ಸದ್ಯ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಅಭ್ಯಾಸ ಪಂದ್ಯದ ವೇಳೆ ಆಟಗಾರರ ಬಳಿ ಬಂದು ಅಭಿಮಾನಿಗಳು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ನಿರಂತರ ಪೋಸ್ ನೀಡಿದ ಬೆನ್ನಲ್ಲೇ ರೋಹಿತ್ ಶರ್ಮಾ ಕೊರೊನಾ ಸೋಂಕಿಗೆ ಒಳಗಾದರು. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಟೀಂ ಇಂಡಿಯಾ ಆಟಗಾರರು ಅಭಿಮಾನಿಗಳೊಂದಿಗೆ ಸೆಲ್ಪೀಗೆ ಪೋಸ್ ನೀಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಬಿಸಿಸಿಐ ಹೊರಡಿಸಿತು. ಆದರೆ ಬಿಸಿಸಿಐ ಸೂಚನೆಗೆ ಕ್ಯಾರೇ ಎನ್ನದೆ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಸೆಲ್ಪೀಗೆ ಪೋಸ್ ನೀಡುವುದನ್ನು ಮುಂದುವರಿಸಿದ್ದಾರೆ.
ಸೂಚನೆ ಮೀರಿ ಸೆಲ್ಪೀಗೆ ಪೋಸ್ ನೀಡುತ್ತಿರುವ ಆಟಗಾರರ ನಡೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆಟಗಾರರಿಬ್ಬರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಿಸಿಸಿಐನ್ನು ಆಗ್ರಹಿಸಿದ್ದಾರೆ.