ಬೆಂಗಳೂರು, ಜೂ 30 (DaijiworldNews/DB): ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್. ರಾಹುಲ್ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಶೀಘ್ರ ನಿಮ್ಮನ್ನೆಲ್ಲ ಭೇಟಿಯಾಗುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ.
ತಾನು ಚೇತರಿಸಿಕೊಳ್ಳುತ್ತಿರುವ ಕುರಿತು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿರುವ ರಾಹುಲ್,. ಕಳೆದ ಕೆಲವು ವಾರಗಳು ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಸದ್ಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗಾಗಿ ಧನ್ಯವಾದಗಳು. ಶೀಘ್ರ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಆಸ್ಪತ್ರೆಯ ಹಾಸಿಗೆ ಮೇಲೆ ರಿಲ್ಯಾಕ್ಸ್ ಆಗಿ ನಗುತ್ತಾ ಕುಳಿತುಕೊಂಡಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಗೆಳತಿ ಅಥಿಯಾ ಶೆಟ್ಟಿ ಅವರೊಂದಿಗೆ ರಾಹುಲ್ ಜರ್ಮನಿಗೆ ತೆರಳಿದ್ದರು.
ತೊಡೆ ಸಂದು ಗಾಯಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ರಿಷಬ್ ಪಂತ್ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಇದೀಗ ರಾಹುಲ್ ಚೇತರಿಸಿಕೊಳ್ಳುತ್ತಿದ್ದರೂ, ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಪುನಶ್ವೇತನ ಕೇಂದ್ರಕ್ಕೆ ತೆರಳಲಿದ್ದು, ಅಲ್ಲಿಂದ ಮತ್ತೆ ಟೀಂ ಇಂಡಿಯಾಕ್ಕೆ ಮರಳಲು ಎಷ್ಟು ದಿನ ಹಿಡಿಯಲಿದೆ ಎಂಬುದು ತಿಳಿದು ಬಂದಿಲ್ಲ.