ರಾಂಚಿ, ಜು 02 (DaijiworldNews/DB): ಸಣ್ಣ ಅನಾರೋಗ್ಯ ಕಾಡಿದರೂ ದುಬಾರಿ ಆಸ್ಪತ್ರೆಗಳ ಮೊರೆ ಹೋಗುವ ಕ್ರಿಕೆಟಿಗರ ಪೈಕಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮಾತ್ರ ವಿಭಿನ್ನವಾಗಿ ಕಾಣುತ್ತಾರೆ. ಏಕೆಂದರೆ ಅವರು ತಮ್ಮ ಮೊಣಕಾಲು ನೋವಿನ ಚಿಕಿತ್ಸೆಗಾಗಿ ಹೋಗಿರುವುದು ಮರದ ಅಡಿಯಲ್ಲಿ ಔಷಧಿ ನೀಡುತ್ತಿರುವ ನಾಟಿ ವೈದ್ಯರ ಬಳಿ!
ಧೋನಿ ಅವರಿಗೆ ಕಳೆದೊಂದು ತಿಂಗಳಿನಿಂದ ಮೊಣಕಾಲಿನ ನೋವಿಗೆ ನಾಟಿ ಚಿಕಿತ್ಸೆ ನಡೆಯುತ್ತಿದೆ. ರಾಂಚಿಯ ಬಂಧನ್ ಸಿಂಗ್ ಅವರೇ ಧೋನಿಯವರ ನಾಟಿ ವೈದ್ಯ. ವಿಶೇಷವೆಂದರೆ ಇವರು ಧೋನಿ ಹೆತ್ತವರಿಗೂ ಔಷಧಿ ನೀಡಿದ್ದರಂತೆ.
ರಾಂಚಿ ಬಳಿಯಿರುವ ಕಟಿಂಗ್ಕೆಲಾ ಎಂಬ ಗ್ರಾಮದಲ್ಲಿ ಮರವೊಂದರ ಅಡಿಗೆ ಸಣ್ಣದೊಂದು ಗೂಡು ಮಾಡಿಕೊಂಡು ರೋಗಿಗಳ ಸೇವೆಯಲ್ಲಿ ಬಂಧನ್ ಸಿಂಗ್ ತೊಡಗಿಸಿಕೊಂಡಿದ್ದಾರೆ. ಕಳೆದೊಂದು ತಿಂಗಳಿನಿಂದ ಪ್ರತಿ ನಾಲ್ಕು ದಿನಕ್ಕೊಮ್ಮೆ ಇವರ ಬಳಿ ತೆರಳಿ ಧೋನಿಯವರು ಔಷಧಿ ಸೇವಿಸುತ್ತಾರೆ. ಆದರೆ ತೀರಾ ಇತ್ತೀಚಿನವರೆಗೆ ಧೋನಿ ಯಾರೆಂಬುದೇ ನಾಟಿ ವೈದ್ಯರಿಗೆ ತಿಳಿದಿರಲಿಲ್ಲ. ಕೆಲ ಸಮಯದ ಹಿಂದೆ ಊರಿನ ಮಕ್ಕಳು ಧೋನಿಯವರೊಂದಿಗೆ ಸೆಲ್ಫೀಗೆ ಮುಗಿಬಿದ್ದಾಗಲೇ ಬಂಧನ್ ಸಿಂಗ್ ಅವರಿಗೆ ಇವರು ಕ್ರಿಕೆಟಿಗ ಧೋನಿ ಎಂಬುದು ಗೊತ್ತಾಗಿರುವುದು. ಧೋನಿ ಕೂಡಾ ತಮ್ಮ ಪರಿಚಯವನ್ನು ವೈದ್ಯರ ಬಳಿ ಹೇಳಿಕೊಂಡಿರಲಿಲ್ಲ. ಅಲ್ಲದೆ, ಧೋನಿ ಹೆತ್ತವರ ಹಿನ್ನೆಲೆಯೂ ಬಂಧನ್ ಸಿಂಗ್ ಅವರಿಗೆ ಗೊತ್ತಿರಲಿಲ್ಲ.
ಬಂಧನ್ ಸಿಂಗ್ ನೀಡುವ ಔಷಧಿಯನ್ನು ಮನೆಗೆ ಕೊಂಡೊಯ್ಯುವಂತಿಲ್ಲ. ಔಷಧಿ ನೀಡಿದ ತತ್ಕ್ಷಣ ಅಲ್ಲೇ ಸೇವಿಸಬೇಕು. ಹೀಗಾಗಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಭೇಟಿ ನೀಡಿ ಪ್ರಕೃತಿಯ ನಡುವೆ ಕುಳಿತು ನಾಟಿ ಔಷಧಿಯನ್ನು ಧೋನಿ ಸೇವಿಸುತ್ತಿದ್ದಾರೆ.