ನವದೆಹಲಿ, ಜು 03 (DaijiworldNews/DB): ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಜಸ್ಪ್ರೀತ್ ಬುಮ್ರಾ ಅವರ ಬ್ಯಾಟಿಂಗ್ ಕೈಚಳಕಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದ್ಭುತ ಬ್ಯಾಟಿಂಗ್ನಿಂದಾಗಿ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಎಡ್ಜ್ಬಾಸ್ಟನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 10 ನೇ ಸ್ಥಾನದಲ್ಲಿಬುಮ್ರಾ ಬ್ಯಾಟಿಂಗ್ಗೆ ಬಂದರು. ಬ್ಯಾಟಿಂಗ್ ಆರಂಭಿಸಿದಾಕ್ಷಣದಿಂದ 16 ಎಸೆತಗಳಲ್ಲಿ 31 ರನ್ ಗಳಿಸಿ ಪ್ರಸಿದ್ದಿಯಾದರು. ಅಲ್ಲದೆ, ತಮ್ಮ ಇನ್ನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಬಾರಿಸಿದರು. ಸ್ಟುವರ್ಟ್ ಬ್ರಾಡ್ ಅವರ ಓವರ್ನಲ್ಲಿ 29 ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್ನ ಇತಿಹಾಸದಲ್ಲಿ ಅತ್ಯಂತ ದಾಖಲೆಯ ಓವರ್ ಇದಾಗಿದೆ. ಅಲ್ಲದೆ ನಾಯಕನಾಗಿ ಬಿಶನ್ ಬೇಡಿ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹಿರಿಮೆಯೂ ಬುಮ್ರಾ ಪಾಲಾಯಿತು.
1976 ರಲ್ಲಿ ಬಿಶನ್ ಬೇಡಿ ಕ್ರೈಸ್ಟ್ಚರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ನಾಯಕನಾಗಿ 10 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 30 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಬರೋಬ್ಬರಿ 46 ವರ್ಷಗಳ ನಂತರ ಬುಮ್ರಾ ಅವರು ಬಿಶನ್ ಬೇಡಿ ದಾಖಲೆಯನ್ನು ಮುರಿದಿದ್ದಾರೆ.