ನವದೆಹಲಿ, ಜು 06 (DaijiworldNews/DB): ರೆಫರಿ ಮಾಡಿದ “ಮಾನವ ದೋಷ’ಕ್ಕಾಗಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರಲ್ಲಿ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿಯ ಚೇರ್ಮನ್ ಚಿಹ್ ಶೆನ್ ಚೆನ್ ಅವರು ಕ್ಷಮೆ ಕೋರಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದ ವೇಳೆ ರೆಫರಿ ಪ್ರಮಾದ ಎಸಗಿದ್ದರು. ಜಪಾನ್ನ ಅಕಾನೆ ಯಮಗುಚಿ ಅವರ ವಿರುದ್ಧದ ಪಂದ್ಯದ ವೇಳೆ ಸಿಂಧು ಹೊಡೆತವನ್ನು ಅಂಪಾಯರ್ ನ್ಯಾಯೋಚಿತವಲ್ಲದ ಹೊಡೆತ ಎಂಬುದಾಗಿ ಘೋಷಿಸಿದ್ದರು. ಇದರಿಂದ ಸಿಂಧು ತೀವ್ರ ಬೇಸರಗೊಂಡಿದ್ದರು. ಇದು ಅವರ ಸೋಲಿಗೂ ಕಾರಣವಾಗಿತ್ತಲ್ಲದೇ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾದ ಸಿಂಧು ಕಂಚಿನ ಪದಕವನ್ನಷ್ಟೇ ಪಡೆದುಕೊಳ್ಳಬೇಕಾಯಿತು. ಹೀಗಾಗಿ ಇಲ್ಲಿ ಆದ ಪ್ರಮಾದದ ಬಗ್ಗೆ ಇದೀಗ ಚಿಹ್ ಶೆನ್ ಚೆನ್ ಕ್ಷಮೆ ಯಾಚಿಸಿದ್ದು, ಈ ಘಟನೆ ದುರದೃಷ್ಟವಶಾತ್ ನಡೆದು ಹೋಗಿದೆ. ಆದರೆ ಇನ್ನು ತಿದ್ದುಪಡಿ ಅಸಾಧ್ಯ. ಮುಂದೆ ಇಂತಹ ತಪ್ಪುಗಳು ಘಟಿಸದಂತೆ ಸೂಕ್ತ ಕ್ರಮ ವಹಿಸುತ್ತೇವೆ. ಪ್ರಮಾದಕ್ಕಾಗಿ ಕ್ಷಮೆ ಇರಲಿ ಎಂದು ಸಿಂಧು ಅವರಿಗೆ ಪತ್ರ ಮೂಲಕ ಕ್ಷಮೆ ಕೋರಿದ್ದಾರೆ.
ಅನಾನುಕೂಲತೆಗಾಗಿ ನಾವು ಕ್ಷಮೆ ಕೋರುತ್ತೇವೆ. ಇದು ಕ್ರೀಡೆಯ ಭಾಗವಾಗಿರುವುದರಿಂದ ನಮ್ಮ ಕ್ಷಮೆಯನ್ನು ಮನ್ನಿಸುತ್ತೀರಿ ಎಂದು ಭಾವಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.