ಲಂಡನ್, ಜು 08 (DaijiworldNews/DB): ಕಿಬ್ಬೊಟ್ಟೆಯ ಗಾಯದಿಂದ ಬಳಲುತ್ತಿರುವ ಸ್ಪ್ಯಾನಿಷ್ ಟೆನಿಸ್ ತಾರೆ ರಾಫೆಲ್ ನಡಾಲ್ ವಿಂಬಲ್ಡನ್ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ಗುರುವಾರ ಅಧಿಕೃತ ಘೋಷಣೆ ಮಾಡಿದ್ದಾರೆ.
ವಿಂಬಲ್ಡನ್ 2022ರ ಸೆಮಿಫೈನಲ್ನಲ್ಲಿ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ ಆಡುವ ವೇಳೆ ಕಿಬ್ಬೊಟ್ಟೆ ನೋವಿಗೆ ಒಳಗಾದರು. ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವರು ಇದೀಗ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಈ ಪಂದ್ಯದಲ್ಲಿ ನಿಕ್ ಕಿರ್ಗಿಯೋಸ್ ನಡಾಲ್ಗೆ ಎದುರಾಳಿಯಾಗಿದ್ದರು. ನಿಕ್ ಅವರು ಭಾನುವಾರ ನಡೆಯುವ ಫೈನಲ್ನಲ್ಲಿ ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಅಥವಾ ಬ್ರಿಟನ್ನ ಕ್ಯಾಮರೂನ್ ನಾರ್ರಿ ಅವರೊಂದಿಗೆ ಸೆಣಸಾಡಲಿದ್ದಾರೆ.
ರಾಫೆಲ್ ನಡಾಲ್ 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆದ ದಾಖಲೆಯನ್ನು ಹೊಂದಿದ್ದಾರೆ. ಕಳೆದ ಬುಧವಾರ 11ನೇ ಶ್ರೇಯಾಂಕದ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ ಐದು ಸೆಟ್ಗಳ ಜಯ ದಾಖಲಿಸಿದ್ದ ನಡಾಲ್, ಕಿಬ್ಬೊಟ್ಟೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕ್ವಾರ್ಟ್ರ್ ಫೈನಲ್ನಲ್ಲಿ ಜಯ ಗಳಿಸಿದರೂ ಸೆಮಿ ಫೈನಲ್ ಆಡಲು ಅವರಿಂದ ಸಾಧ್ಯವಾಗುತ್ತಿಲ್ಲ.
ಸ್ಪ್ಯಾನಿಷ್ ಕ್ರೀಡಾ ದಿನಪತ್ರಿಕೆಯೊಂದರ ವರದಿ ಪ್ರಕಾರ, ರಾಫೆಲ್ ನಡಾಲ್ ಅವರ ಕಿಬ್ಬೊಟ್ಟೆಯಲ್ಲಿ ಏಳು ಮಿಲಿಮೀಟರ್' ನೀರು ತುಂಬಿದೆಯಂತೆ. ಈ ಸಂಕಷ್ಟದ ಸಮಯದಲ್ಲೂ ಅವರಿಗೆ ಸೆಮಿಫೈನಲ್ ಆಡುವ ಇಚ್ಚೆ ಬಲವಾಗಿತ್ತು. ಆದರೆ ಬಳಿಕ ಅವರು ಈ ನಿರ್ಧಾರದಿಂದ ಹಿಂದೆ ಸರಿದು ಸೆಮಿ ಫೈನಲ್ ಆಡದಿರಲು ನಿರ್ಧರಿಸಿದರು ಎನ್ನಲಾಗಿದೆ.