ಹೊಸದಿಲ್ಲಿ, ಜು 09 (DaijiworldNews/DB): ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ರವೀಂದ್ರ ಜಡೇಜ ಮತ್ತು ಸಿಎಸ್ಕೆ ನಡುವೆ ಏನೋ ಸರಿಯಿಲ್ಲ ಎಂಬ ಗುಸುಗುಸು ಅಭಿಮಾನಿ ವಲಯದಲ್ಲಿ ಶುರುವಾಗಿದೆ. ಕಳೆದ ಎರಡು ವರ್ಷಗಳಿಂದ ಸಿಎಸ್ಕೆ ಪರವಾಗಿ ಹಾಕಿರುವ ಎಲ್ಲಾ ಪೋಸ್ಟ್ಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಿಂದ ಜಡೇಜ ಅಳಿಸಿ ಹಾಕಿರುವುದೇ ಇದಕ್ಕೆ ಕಾರಣವಾಗಿದೆ.
ಈ ಐಪಿಎಲ್ ಮೊದಲು ಸಿಎಸ್ಕೆ ನಾಯಕತ್ವವನ್ನು ಎಂ.ಎಸ್. ಧೋನಿ ತ್ಯಜಿಸಿದ್ದರು. ಆ ಬಳಿಕ ವರ್ಷಾರಂಭದಲ್ಲಿ ಜಡೇಜರನ್ನು ಸಿಎಸ್ಕೆ ನಾಯಕರನ್ನಾಗಿ ನೇಮಕ ಮಾಡಲಾಯಿತು. ಆದರೆ 2022 ರ ಐಪಿಎಲ್ನ ಮಧ್ಯದಿಂದಲೇ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಅಲ್ಲದೆ, ಮರಳಿ ಧೋನಿ ಅವರಿಗೇ ನಾಯಕನ ಜವಾಬ್ದಾರಿ ನೀಡಲಾಯಿತು. ಈ ವಿದ್ಯಾಮಾನಗಳ ಬಳಿಕ ಪಕ್ಕೆಲುಬಿನ ಹಾಯದಿಂದಾಗಿ ಜಡೇಜ ಐಪಿಎಲ್ನಿಂದ ಹೊರಗುಳಿದಿದ್ದರು. ಆದರೆ ಬಳಿಕ ಸಿಎಸ್ಕೆ ಪರ ಆಟದಲ್ಲಿ ತೊಡಗಿಸಿಕೊಂಡಿದ್ದರು.
ಐಪಿಎಲ್ ಮುಗಿದ ಬಳಿಕ ಇದೀಗ ಸಿಎಸ್ಕೆ ಮೇಲೆ ಜಡೇಜ ಮುನಿಸಿಕೊಂಡಂತೆ ಕಾಣುತ್ತಿದೆ. ಪ್ರತಿ ವರ್ಷ ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದ ಜಡೇಜ ಈ ಬಾರಿ ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿಗೆ ಯಾವುದೇ ರೀತಿಯ ಶುಭಾಶಯ ಕೋರಿಲ್ಲ. ಅಲ್ಲದೆ ತಮ್ಮ ಇನ್ಸ್ಟಾಗ್ರಾಂ ಪ್ರೊಫೈಲ್ನಲ್ಲಿ 2021 ಹಾಗೂ 2022ರಲ್ಲಿ ಸಿಎಸ್ಕೆ ಅಭಿಮಾನಿಗಳೊಂದಿಗೆ ಮಾಡಿದ ಚಿತ್ರಗಳ ಎಲ್ಲಾ ಲಿಂಕ್ಗಳನ್ನು ಅಳಿಸಿ ಹಾಕಿ ಅಚ್ಚರಿ ಹುಟ್ಟಿಸಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು 2023 ರ ಐಪಿಎಲ್ನಲ್ಲಿ ಜಡೇಜ ಸಿಎಸ್ಕೆ ತೊರೆಯಲಿದ್ದಾರೆ. ಇದನ್ನು ಒಪ್ಪಲು ಸಿಎಸ್ಕೆ ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ ನಿಜವಾದ ವಿಷಯ ಏನೆಂಬುದನ್ನು ಸ್ವತಃ ಜಡೇಜ ಅವರೇ ಸ್ಪಷ್ಟಪಡಿಸಬೇಕಿದೆ.