ಮುಂಬೈ, ಜು 10 (DaijiworldNews/DB): ಕ್ರೀಡಾ ತಾರೆಗಳಾದ ಅಂತಾರಾಷ್ಟ್ರೀಯ ಬಾಕ್ಸರ್ ಮತ್ತು ಭೀಮ್ ಪ್ರಶಸ್ತಿ ಪುರಸ್ಕೃತ ಬಾಕ್ಸರ್ ಸ್ವೀಟಿ ಬುರಾ ಹಾಗೂ ಭಾರತ ಕಬಡ್ಡಿ ತಂಡದ ನಾಯಕ ದೀಪಕ್ ಹೂಡಾ ಇದೇ ಜುಲೈ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ದಕ್ಷಿಣ ಬೈಪಾಸ್ನ ರತನ್ ಪ್ಯಾಲೇಸ್ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ವಿವಿಧ ಕ್ರೀಡಾ ತಾರೆಗಳು, ಗಣ್ಯರು ಆಗಮಿಸಿ ದಂಪತಿಗೆ ಶುಭ ಹಾರೈಸಿದರು. ಮದುವೆ ಕುರಿತು ಸಂತಸ ವ್ಯಕ್ತಪಡಿಸಿರುವ ಸ್ವೀಟಿ ಬುರಾ, ವಿವಾಹದ ಬಳಿಕ ಜವಾಬ್ದಾರಿ ಹೆಚ್ಚಾಗುವುದು ಸಹಜ. ಆದರೆ ವೃತ್ತಿಗೆ ಅದು ತೊಡಕಾಗದಂತೆ ನೋಡಿಕೊಳ್ಳಲಾಗುವುದು. ತನ್ನ ಕ್ರೀಡಾ ಜೀವನವನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ. ಇಬ್ಬರೂ ಕ್ರೀಡಾ ಕ್ಷೇತ್ರದವರೇ ಆಗಿರುವುದರಿಂದ ಆ ಕ್ಷೇತ್ರದಲ್ಲಿ ಮುಂದುವರಿಯಲು ಪರಸ್ಪರ ಸಮಸ್ಯೆಯಾಗದು ಎಂದರು. ಚೀನಾದಲ್ಲಿ ಮುಂದಿನ ಸೆಪ್ಟಂಬರ್ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಗೆ ಸ್ವೀಟಿ ತಯಾರಿ ನಡೆಸುತ್ತಿದ್ದಾರೆ.
ಏಳು ವರ್ಷಗಳ ಸ್ನೇಹ-ಪ್ರೀತಿ
2015ರಲ್ಲಿ ದೀಪಕ್ ಮತ್ತು ಸ್ವೀಟಿ ಮ್ಯಾರಥಾನ್ನಲ್ಲಿ ಭೇಟಿಯಾದರು. ಆ ಬಳಿಕ ಆತ್ಮೀಯ ಸ್ನೇಹಿತರಾಗಿದ್ದ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ವರ್ಷದ ಬಳಿಕ ಸ್ವೀಟಿ ಅವರಿಗೆ ದೀಪಕ್ ಪ್ರೊಪೋಸ್ ಮಾಡಿದ್ದರು. ಇದಕ್ಕೆ ಸ್ವೀಟಿ ಕೂಡಾ ಒಪ್ಪಿಗೆ ಸೂಚಿಸಿದ್ದು, ಇದೀಗ ಏಳು ವರ್ಷದ ಅವರ ಸ್ನೇಹ ಮತ್ತು ಪ್ರೀತಿ ದಾಂಪತ್ಯ ಜೀವನಕ್ಕೆ ಬೆಸುಗೆಯಾಗಿದೆ.
ಕಬಡ್ಡಿ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆ ಪರಿಗಣಿಸಿ ಭಾರತ ಸರ್ಕಾರವು 2020ರಲ್ಲಿ ದೀಪಕ್ ನಿವಾಸ್ ಹೂಡಾ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. 2014ರಲ್ಲಿ ಪ್ರೊ ಕಬಡ್ಡಿ ಲೀಗ್ಗೆ ಪಾದಾರ್ಪಣೆ ಮಾಡಿದ
ದೀಪಕ್ ಅವರು ಪ್ರಸ್ತುತ ಟೀಂ ಇಂಡಿಯಾ ಕಬಡ್ಡಿ ತಂಡದ ನಾಯಕರಾಗಿದ್ದಾರೆ.